‘ಅರಬ್ಬೀ’ ಸಾಧಕನ ಕಥೆ

ಛಲವಿದ್ದರೆ ಯಾವುದೂ ಅಸಾಧ್ಯವಲ್ಲ, ಅಂಗವಿಕಲತೆ ಅಡ್ಡಿಯಾಗಲಾರದು ಎನ್ನುವುದನ್ನು  ವಿಶ್ವಾಸ್ ಎಂಬ ವಿಶೇಷಚೇತನ ಪ್ರತಿಭೆ ನಿರೂಪಿಸಿದ್ಧಾರೆ.

ನಿರ್ದೇಶಕ ರಾಜ್‍ಕುಮಾರ್ “ಅರಬ್ಬೀ” ಚಿತ್ರದ ಮೂಲಕ ಸಾಧಕನ ಕಥೆ ಹೇಳಲು ಮುಂದಾಗಿದ್ದಾರೆ.ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ಜೊತೆಗೆ ಎರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್ ಸಮಾಜದಲ್ಲಿ ಸಾಕಷ್ಟು ಅವಮಾನ ಅನುಭವಿಸಿ ಸಾಧನೆಮಾಡಿ ತೋರಿಸಬೇಕೆಂದು ನಿರ್ಧರಿಸಿ, ಹಠ, ಆತ್ಮವಿಶ್ವಾಸದಿಂದಲೇ ಗೆಲುವು ಸಾಧಿಸುತ್ತಾನೆ. ಸ್ವಿಮ್ಮಿಂಗ್ ಕೋಚ್  ಆಗಿ ನಾಯಕನಿಗೆ ಸ್ಪೂರ್ತಿ ತುಂಬುವ ಪಾತ್ರವನ್ನು ಅಣ್ಣಾಮಲೈ ನಿರ್ವಹಿಸಿದ್ದಾರೆ. ವಿಶ್ವಾಸ್ ಕೊನೆಗೂ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದನೇ ಇಲ್ಲವೇ ಎನ್ನುವುದೇ ಅರಬ್ಬೀ ಚಿತ್ರದ ತಿರುಳು.

ನಿರ್ಮಾಪಕ ಚೇತನ್ ಸಿ.ಎಸ್. ಮಾತನಾಡಿ ಛಲವಿದ್ದರೆ ಏನನ್ನಾದರೂ ಮಾಡಿ ತೋರಿಸಬಹುದು ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ,  ಉಡುಪಿ, ಅರಬ್ಬೀ ಸಮುದ್ರದಲ್ಲಿ 32 ದಿನಗಳವರೆಗೆ ಚಿತ್ರೀಕರಿಸಿದ್ದೇವೆ, ಎಂದರು.

ನಿರ್ದೇಶಕ ರಾಜಕುಮಾರ್ ಮಾತನಾಡಿ ವಿಶ್ವಾಸ್ ರನ್ನು  ಒಪ್ಪಿಸಿ, ನಂತರ ಕೋಚ್ ಪಾತ್ರಕ್ಕೆ ಅಣ್ಣಾ ಮಲೈ ಅವರನ್ನು ಕರೆತಂದೆವು, ಯಾವುದೇ ಸಂಭಾವನೆ ಪಡೆಯದೆ ಅಭಿನಯಿಸಿದರು. ಚಿತ್ರವೀಗ ಬಿಡುಗಡೆಗೆ ಸಿದ್ದವಿದೆ ಎಂದು ಹೇಳಿದರು.

ನಾಯಕ ವಿಶ್ವಾಸ್ ಮಾತನಾಡಿ ಮೊದಲಬಾರಿಗೆ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ. ಅಣ್ಣಾಮಲೈ ಅವರೂ ನನ್ನ ಬಗ್ಗೆ ಕೇಳಿ ಒಪ್ಪಿದರು. ಚಿತ್ರದಲ್ಲಿ ನಾನೊಬ್ಬ ಈಜುಗಾರನಾಗಿ ಕಾಣಿಸಿಕೊಂಡಿದ್ದೇನೆ. ದೇವರ ಮೇಲಿನ ಕೋಪವನ್ನು ಹೇಗೆ ವ್ಯಕ್ತಪಡಿಸುವೆ, ದಿನನಿತ್ಯದ ಕೆಲಸಗಳನ್ನು ಹೇಗೆ ಮಾಡಿಕೊಳ್ಳುವೆ ಎನ್ನುವುದು ಪಾತ್ರದ ತಿರುಳು ಎಂದರು.

ಸಂಗೀತ ನಿರ್ದೇಶಕ ಕಂಬದ ರಂಗಯ್ಯ ಮಾತನಾಡಿ ಹಂಸಲೇಖ ಅವರೇ ನನಗೆ ಸ್ಪೂರ್ತಿ. ವೇದಿಕೆಯಲ್ಲಿ ಹಾಡ್ತಿದ್ದ ನನ್ನನ್ನು ಕರೆದು ಈ ಅವಕಾಶ ನೀಡಿದರು. ಚಿತ್ರದಲ್ಲಿ 2 ಹಾಡುಗಳಿದ್ದು, ಚಂದನ್ ಶೆಟ್ಟಿ, ರಾಜೇಶ್ ಕೃಷ್ಣನ್ ಹಾಡಿದ್ದಾರೆ ಎಂದು ಹೇಳಿದರು.