ಅರಬಗಟ್ಟೆಯಲ್ಲಿ ೮೦೦ ಬೆಡ್ ನ ಕೋವಿಡ್ ಕೇರ್ ಸೆಂಟರ್; ನಾಳೆ ಉದ್ಘಾಟನೆ

ಹೊನ್ನಾಳಿ.ಮೇ.೩೦;: ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಬಗಟ್ಟೆಯಲ್ಲಿರುವ ವಸತಿ ಶಾಲೆಯಲ್ಲಿ 800 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು ನಾಳೆ  ಜಿಲ್ಲಾಉಸ್ತುವಾಗಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಲಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಅಧಿಕಾರಿಗಳೊಂದಿಗೆ ಅರಬಗಟ್ಟೆಯ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಸಿ ಪರಿಸ್ಥಿತಿ ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ತಾಲೂಕಿನ ಸಾಸ್ವೇಹಳ್ಳಿ ಹಾಗೂ ಜೀವನಹಳ್ಳಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಿ ಅರಬಗಟ್ಟೆಯ ವಸತಿ ಶಾಲೆಯಲ್ಲಿ 800 ಬೆಡ್‌ಗಳ ಸುಸಜ್ಜಿತ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು ಸೋಮವಾರದಿಂದಲೇ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ ಎಂದರು.ಈಗಾಗಲೇ ಅರಬಗಟ್ಟೆಯಲ್ಲಿನ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಬೇಕಾದ ಹಾಸಿಗೆ, ಮಂಚ ಜೋಡನೆ ನಡೆಯುತ್ತಿದ್ದು ದಿನದ 24 ಘಂಟೆಯೂ ವಿದ್ಯುತ್ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.ಸಾಸ್ವೇಹಳ್ಳಿ ಹಾಗೂ ಜೀನಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಗುಣಮುಖರಾದವನ್ನು ಬಿಟ್ಟು ಉಳಿದವರನ್ನು ಅರಬಗಟ್ಟೆಗೆ ಸ್ಥಳಾಂತರಿಸುವುದಾಗಿ ತಿಳಿಸಿದ ಶಾಸಕರು ಸೋಂಕಿತರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಒಂದೇ ಕಡೆ ಸಿಗ ಬೇಕೆಂಬ ಉದ್ದೇಶದಿಂದ 800 ಹಾಸಿಗೆಗಳ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಗೊಳ್ಳಲಿದೆ ಎಂದರು.ಈ ಸಂದರ್ಭ ತಹಶೀಲ್ದಾರ್ ಬಸನಗೌಡ ಕೋಟೂರ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ, ಬೆಸ್ಕಾಂ ಎಇಇ ರವಿಕಿರಣ್, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್,ಪಿಎಸೈ ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ, ಎಪಿಎಂಸಿ ಸದಸ್ಯ ಕುಬೇರಪ್ಪ ಇದ್ದರು.