ಅರಣ್ಯ ಹೆಚ್ಚಿಸಲು ವನ ಮಹೋತ್ಸವ ಸಹಕಾರಿ


ಸಂಜೆವಾಣಿ ವಾರ್ತೆ 
ಹಗರಿಬೊಮ್ಮನಹಳ್ಳಿ. ಜು.05  ಅರಣ್ಯ ಬೆಳೆಸಲಿಕ್ಕೆ ವನ ಮಹೋತ್ಸವ ಕಾರ್ಯಕ್ರಮ ಸಹಕಾರಿಯಾಗಲಿದೆ  ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಎಂ.ನಾಗರಾಜ ತಿಳಿಸಿದರು. 
ತಾಲೂಕಿನ ಹನಸಿ ಹಾಗೂ ಬೆಣಕಲ್ಲು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಲ್ಲಹಳ್ಳಿ ಯಿಂದ ಬೆಣಕಲ್ಲುವರೆಗೂ ರಸ್ತೆ ಬದಿ ನೆಡು ತೋಪು ನಿರ್ಮಾಣ ಹಾಗೂ ಕೃಷಿ ಅರಣ್ಯದಲ್ಲಿ ಸಸಿ ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜುಲೈ 1 ರಿಂದ 7 ರವರೆಗೂ ವನ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.   
ಭೂಮಿಯಲ್ಲಿ ಶೇ. 33% ರಷ್ಟು ಅರಣ್ಯ ಇರಬೇಕು.ಪ್ರಸ್ತುತ ದಿನಗಳಲ್ಲಿ ಭೂಮಿಯಲ್ಲಿ 21%  ರಷ್ಟು ಅರಣ್ಯ ಇದ್ದು 33% ರಷ್ಟು ಅರಣ್ಯವನ್ನು ಹೆಚ್ಚಿಸುವ ಗುರಿ ಇದ್ದು ಈ ನಿಟ್ಟನಲ್ಲಿ ವನ ಮಹೋತ್ಸವಗಳಂತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಸ್ತೆ ಬದಿ ಗಿಡ ನೆಡುವ ರೈತರ ಹೊಲದಲ್ಲಿ ಕೃಷಿ ಅರಣ್ಯವನ್ನು ಮಾಡುವುದರೊಂದಿಗೆ ಅರಣ್ಯ ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.                          ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ ಸಸಿಗೆ ನೀರು ಹಾಕುವ ಮೂಲಕ ವನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರ ಸ್ವಚ್ಚವಾಗಿ ಇಟ್ಟು ಕೊಳ್ಳುವುದರಿಂದ ಹಾಗೂ ಗಿಡ ಮರಗಳನ್ನು ಬೆಳೆಸುವುದರಿಂದ ಶುದ್ದವಾದ ಗಾಳಿ ಪಡೆಯಬಹುದು.ಆರೋಗ್ಯವನ್ನು ಉತ್ತಮ ವಾಗಿಟ್ಟು ಕೊಳ್ಳಬಹುದು.ರೈತರು ತಮ್ಮ ಹೊಲದ ಬದುಗಳಲ್ಲಿ  ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು.ಸಕಲ ಜೀವರಾಶಿಗಳ  ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರವನ್ನು ರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು. 
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ತಿಮ್ಮರಾಜು, ಹನಸಿ ಗ್ರಾಮ ಪಂಚಾಯತಿ ಪಿಡಿಒ ಹುಚ್ಚಪ್ಪ,ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಪ್ಪ, ಬೆಳದೇರಪ್ಪ,ಹನಸಿ ,ಕಲ್ಲಹಳ್ಳಿ, ಬೆಣಕಲ್ಲು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳು ಇದ್ದರು.