ಅರಣ್ಯ ರಕ್ಷಿಸಿದರೆ ಜೀವ ಸಂಕುಲ ರಕ್ಷಿಸಿದ್ದಂತೆ:ಡಾ.ಪುಷ್ಪಾ ಸವದತ್ತಿ

ಕಲಬುರಗಿ,ಜು.20: ಅರಣ್ಯ ರಕ್ಷಿಸಿದರೆ ಜೀವ ಸಂಕುಲ ರಕ್ಷಿಸಿದಂತೆ. ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದ ಸೈನಿಕರಾಗಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾ ಸವದತ್ತಿ ಹೇಳಿದರು.
ಮಂಗಳವಾರ (ಜು.19) ರಂದು ಕಲಬುರಗಿ ನಗರ ಹೊರ ವಲಯದ ಶರಣಸಿರಸಗಿಯ ಪ್ರಾದೇಶಿಕ ಭೂಮಾಪನ ತರಬೇತಿ ಸಂಸ್ಥೆಯಲ್ಲಿ ಸುಮಾರು 100 ಜನ ಉಪ ವಲಯ ಅರಣ್ಯಾಧಿಕಾರಿ-ವ-ಮೋಜಣಿದಾರರಿಗೆ ಮೂರು ತಿಂಗಳ ಅವಧಿಯ ಭೂಮಾಪನದ ವಿಷಯದ ಕುರಿತು ಆಯೋಜಿಸಿದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್. ವೆಂಕಟೇಸನ್ ಮಾತನಾಡಿ, ಉಪ ವಲಯ ಅರಣ್ಯಾಧಿಕಾರಿಗಳು ಮೋಜಣಿ ಮತ್ತು ಭೂಮಾಪನ ವಿಷಯದ ಕುರಿತು ತರಬೇತಿ ಪಡೆದುಕೊಂಡಲ್ಲಿ ಅರಣ್ಯ ಅತಿಕ್ರಮಣ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಹಾಗೂ ಪ್ರಾದೇಶಿಕ ಭೂಮಾಪನ ತರಬೇತಿ ಸಂಸ್ಥೆಯ ಪ್ರಾಚಾರ್ಯ ಜಗದೀಶ ಆರ್. ರೂಗಿ ಮಾತನಾಡಿ, ಈ ತರಬೇತಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ-ವ-ಮೋಜಣಿದಾರರಿಗೆ ಭೂಮಾಪನ ವಿಷಯಗಳ ಕುರಿತು ಹಳೇ ಪದ್ದತಿಯಿಂದ ಹಿಡಿದು ಹೊಸ ಪದ್ದತಿಯವರೆಗೆ ಅಲ್ಲದೆ ಹೊಸ ಉಪಕರಣಗಳಾದ ಥೆಡೋಲೈಟ್, ಡ್ರೋನ್‍ಗಳನ್ನು ಅಳವಡಿಸಿಕೊಂಡು ಅರಣ್ಯ, ದೊಡ್ಡ ಕಟ್ಟಡಗಳು, ಗುಡ್ಡಗಾಡು ಪ್ರದೇಶಗಳು, ನದಿಗಳು ಸೇರಿ ಕಠಿಣವಾದ ಪ್ರದೇಶಗಳಲ್ಲಿಯೂ ಸಹ ಸರಳವಾಗಿ ಅಳತೆ ಮಾಡುವ ವಿಧಾನವನ್ನು ತಿಳಿಹೇಳಲಾಗುತ್ತದೆ ಎಂದರು. ಡಿ.ಡಿ.ಎಲ್.ಆರ್. ಶಂಕರ್ ಅವರು ತರಬೇತಿ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಂದ್ರಶೇಖರ್, ಸುನೀಲಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಸುಧಾಕರ ಕಟ್ಟಿಮನಿ, ಪ್ರವೀಣ ಜಾಧವ, ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಮೊಹ್ಮದ್ ಜಮೀಲ್ ಸೇರಿದಂತೆ ಅರಣ್ಯ ಮತ್ತು ಭೂಮಾಪನ ಇಲಾಖೆಗಳ ಹಿರಿಯ ಮತ್ತು ಕಿರಿಯ ಅಧಿಕಾರಿಗಳು-ಸಿಬ್ಬಂದಿಗಳು ಭಾಗವಹಿಸಿದ್ದರು.
ಬೋಧಕ ಭೂತಾಳಸಿದ್ದ ನಿರೂಪಿಸಿದರು. ತಪಾಸಕ ವೆಂಕಟರಾವ ಇಟಗಿ ಇವರು ಸ್ವಾಗತಿಸಿದರೆ, ಭೂಮಾಪಕಿ ಸೀಮಾ ಬಂಟನೂರ ವಂದಿಸಿದರು.