ಅರಣ್ಯ ಬೆಳಸಿ ವನ್ಯಜೀವಿ ಸಂರಕ್ಷಿಸಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.05 : ಹಿಂದೆ ಗಿಡ ಮರಗಳಿಂದ ಕೂಡಿದ ದಟ್ಟವಾದ ಕಾಡುಗಳಿದ್ದವು.ಅದಕ್ಕೆ ತಕ್ಕಂತೆ ಅವುಗಳನ್ನು ಆಶ್ರಯಿಸಿ ಹುಲಿ, ಸಿಂಹ, ಚಿರತೆ, ಆನೆ ಇತ್ಯಾದಿ ವನ್ಯಜೀವಿಗಳು ಅಧಿಕವಾಗಿದ್ದವು.ಇಂದು ಕಾಡು ನಾಶವಾಗಿ ವನ್ಯಜೀವಿ ಸಂಖ್ಯೆ ಕಡಿಮೆಯಾಗಿ ಮಾನವ ಸಂಪನ್ಮೂಲ ಅಧಿಕವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳು ಮನೆಗೊಂದು ಮರ ನೆಟ್ಟು, ಊರಿಗೊಂದು ವನ ಮಾಡಬೇಕು.ಅದಕ್ಕೆ ಗ್ರಾಮ ಪಂಚಾಯಿತಿ ಅವರು ಕೂಡ ಸಹಕರಿಸಬೇಕು ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಹಾಗೂ ಮನೋಹರ್ ಸಸಿನೆಟ್ಟು ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಹನುಮಂತಪ್ಪ, ಅಭಿವೃದ್ಧಿ ಅಧಿಕಾರಿ ಸುಮಲತಾ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.