ಅರಣ್ಯ ನಾಶದಿಂದ ಪರಿಸರ ಮೇಲೆ ದುಷ್ಪರಿಣಾಮ:ವಿಜಯಕುಮಾರ್

ಬಳ್ಳಾರಿ,ಮಾ.19: ಅರಣ್ಯ ನಾಶದಿಂದ ಪರಿಸರದ ಮೇಲೆ ತೀವ್ರ ದುಷ್ಪರಿಣಾಮಗಳಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಹೆಚ್ಚುತ್ತಿವೆ ಎಂದು ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಆರ್.ವಿಜಯಕುಮಾರ್ ಕಳವಳ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಕೃಷಿ ಅರಣ್ಯೀಕರಣ ಉಪ ಅಭಿಯಾನದಡಿ ಪ್ರಗತಿಪರ ರೈತರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಣ್ಯ ಸಂರಕ್ಷಣೆ ಹಾಗೂ ಮರು ಅರಣ್ಯೀಕರಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಈ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಕೃಷಿ ಅರಣ್ಯ ಪ್ರೋತ್ಸಾಹದಡಿ ಜಮೀನಿನ ಬದುಗಳ ಮೇಲೆ ಹಾಗೂ ಅಂತರ ಬೇಸಾಯ ಪದ್ದತಿಯಲ್ಲಿ ನೆಡಲು ವಿವಿಧ ಜಾತಿ ಸಸಿಗಳನ್ನು ನೀಡುತ್ತಿದೆ. ಒಂದೆರೆಡು ವರ್ಷಗಳಲ್ಲಿ ಫಲ ನೀಡುವ ನುಗ್ಗೆ, 3-5 ವರ್ಷಗಳಲ್ಲಿ ಆದಾಯ ತರುವ ನೆಲ್ಲಿ ಹೆಬ್ಬೇವಿನ ಜೊತೆಗೆ 20-30 ವರ್ಷಗಳಲ್ಲಿ ಲಕ್ಷಾಂತರ ರೂ. ಆದಾಯ ತಂದು ಕೊಡುವ ರಕ್ಷತಚಂದನ, ಸಾಗುವಾನಿ, ಮಹಾಗನಿ, ಶ್ರೀಗಂಧ ಮುಂತಾದ ಸಸಿಗಳನ್ನು ನೆಡಬಹುದು. ಇದರಿಂದ ರೈತರಿಗೆ ನಿರಂತರ ಆಧಾಯ ಬರುವುದಲ್ಲದೆ ಪರಿಸರ ಸಮತೋಲನವನ್ನು ಸಾಧಿಸಬಹುದು ಎಂದು ತಿಳಿಸಿದರು.
ಕುರೇಕುಪ್ಪ ಪ್ರಗತಿಪರ ರೈತ ಎಂ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಸೌಲಭ್ಯಕ್ಕೆ ಆಧಾರ ಕಾರ್ಡ್, ಬೈಕ್ ಸವಾರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದಂತೆ ಎಂದು ಎಕರೆಗೆ ಶೇ.20ರಷ್ಟು ಸಸಿಗಳನ್ನು ಬೆಳೆಸಲು ಸರ್ಕಾರ ಕಡ್ಡಾಯಗೊಳಿಸಬೇಕು. ಕಟ್ಟಿಗೆಗಳ ಪುಡಿಯನ್ನು ಸಗಣಿ, ಗಂಜಲು, ಗೋಮೂತ್ರ(ಜೀವಾಮೃತ) ಬೆರೆಸಿ ಅತ್ಯುತ್ತಮ ಸಾವಯವ ಗೊಬ್ಬರ ತಯಾರಿಸಿಕೊಳ್ಳಬಹುದು. ತಮ್ಮ ಜಮೀನಿನಲ್ಲಿ ತೇಗ, ಹುಣಿಸೆ ಗಿಡಗಳ ಜೊತೆಗೆ ಹೂಕೋಸು, ಕರಿಬೇವು ಮತ್ತಿತರ ಬೆಳೆಗಳು ಮತ್ತು ಆವುಗಳಿಂದ ದೊರೆಯುತ್ತಿರುವ ಆದಾಯದ ಬಗ್ಗೆ ತಿಳಿಸಿದರು.
ಸಿರಿಗೇರಿಯ ಪ್ರಗತಿಪರ ರೈತ ಸಂಪತ್ ಕುಮಾರಗೌಡ ಮಾತನಾಡಿ, ಕೇವಲ ಅರ್ಧ ಎಕರೆಯಲ್ಲಿ ತಲಾ30ರಂತೆ ಬಾಳೆ, ತೆಂಗು, ಹೆಬ್ಬೇವು, ಜಂಭು ನೇರಳೆ, ಮಹಾಗನಿ, ಶ್ರೀಗಂಧ, ಟೀಕ್‍ವುಡ್ ಸಸಿಗಳನ್ನು ನೆಟ್ಟು ಅವುಗಳಿಂದ ಬರುವ ಆಧಾಯದಿಂದ ಇಬ್ಬರು ಮಕ್ಕಳನ್ನು ಎಂಬಿಬಿಎಎಸ್ ಓದಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕ ಅಂಕಿ ಅಂಶಗಳ ಸಮೇತ ವಿವರಿಸಿದರು. ತಮ್ಮ ಜಮೀನಿನಲ್ಲಿ ಕೃಷಿ, ಅರಣ್ಯ, ತೋಟಗಾರಿಕೆಯ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ಬಗೆ ಹಾಗೂ ಬೆಳೆಸುವ ವಿಧಾನ ಮತ್ತು ಅವುಗಳಿಂದ ಬರುವ ಆಧಾಯವನ್ನು ವಿವರಿಸಿದರು. ಪ್ರಕೃತಿ ನಮಗೆಲ್ಲಾ ಕೊಟ್ಟಿದೆ ಅದನ್ನು ಕಲುಷಿತಗೊಳಿಸದೆ, ನಾಶ ಮಾಡದೆ ನಮ್ಮ ಮುಂದಿನ ಪೀಳಿಗೆಗೂ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಬೊಮ್ಮಘಟ್ಟ ವಿಶ್ವಮೂರ್ತಿ ರಾಸಾಯನಿಕ ರಹಿತ ಗೊಬ್ಬರ, ಔಷಧಿಗಳ ಬಳಕೆ ಮೂಲಕ ಕೃಷಿ ಅರಣ್ಯೀಕರಣ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ತಿಳಿಸಿಕೊಡುವ ಜೊತೆಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.