ಅರಣ್ಯ ಜಮೀನು ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯ

ಬಳ್ಳಾರಿ, ಏ.17: ಕಳೆದ ಹತ್ತಾರು ದಶಕಗಳಿಂದ ಜಿಲ್ಲೆಯ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುವ ಜನರಿಗೆ ಹಕ್ಕು ಪತ್ರ ನೀಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಇಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳ ಮುಖಂಡರುಗಳಾದ ಎ.ಸ್ವಾಮಿ, ವಿ.ಎಸ್.ಶಿವಶಂಕರ, ಯು.ತಿಪ್ಪೇಸ್ವಾಮಿ, ಗಾಳಿ ಬಸವರಾಜ, ಹೆಚ್.ದುರುಗಮ್ಮ, ಜೆ.ಎಂ.ಚನ್ನಬಸಯ್ಯ, ಹಾಲಪ್ಪ, ಮಾರುತಿ ವೀರೇಶ್ ಮೊದಲಾದವರು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹತ್ತಾರು ದಶಕಗಳಿಂದ ಅರಣ್ಯ ಜಮೀನಿನಲ್ಲಿ ಬಡವರು ಅದರಲ್ಲಿ ಜಮೀನು ರಹಿತ ಪರಿಶಿಷ್ಟ ಜಾತಿ ವರ್ಗದ ಜನರು ಸಾಗುವಳಿ ಮಾಡುತ್ತಾ ಬಂದಿದೆ.
ಇಂತಹ ಸಾಗುವಳಿದಾರರಿಗೆ ಜಮೀನಿನ ಹಕ್ಕು ನೀಡಿ ಅದಕ್ಕೆ ಸೂಕ್ತ ದಾಖಲಾತಿಗಳನ್ನು ತೆಗೆದುಕೊಂಡು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕೆ ರಾಜ್ಯದಲ್ಲಿ 84.625 ಜನರು ಅರ್ಜಿ ಸಲ್ಲಿಸಿದ್ದರೆ, ಅವುಗಳಲ್ಲಿ ಕೇವಲ 16136ನ್ನು ಮಾತ್ರ ಪುರಸ್ಕರಿಸಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ 5272 ಅರ್ಜಿ ಸಲ್ಲಿಸಿದರೆ ಕೇವಲ 76ನ್ನು ಮಾತ್ರ ಪುರಸ್ಕರಿಸಿದ್ದು ಅವುಗಳಿಗೂ ಸಹ ಪಟ್ಟಾ ನೀಡದೆ ವಿಳಂಬ ಮಾಡುತ್ತಿದೆ.
ಗ್ರಾಮ ಪಂಚಾಯ್ತಿಗಳಲ್ಲಿ ಅರಣ್ಯ ಹಕ್ಕು ಸಮಿತಿಗಳು ರಚನೆ ಮಾಡಿದ್ದು ಅದರಲ್ಲಿನ ಸದಸ್ಯರಿಗೆ ಪಿ.ಡಿ.ಓ ಗಳಿಗೆ ಅಗತ್ಯ ಮಾಹಿತಿ ಇಲ್ಲ ವಿನಾಕಾರಣ ಸರ್ಕಾರ ಹೇಳಿದೆಂದು ಅರ್ಜಿಗಳ ತಿರಸ್ಕಾರ ಮಾಡಿದೆ. ಕೈಗಾರಿಕೆಗಳಿಗೆ ಜಮೀನು ನೀಡಲು ತಕ್ಷಣ ಸ್ಪಂದಿಸುವ ಸರ್ಕಾರ ಸಾಗುವಳಿದಾರರಿಗೆ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಒಬ್ಬರಿಗೂ ಸಹ ಈ ವರೆಗೆ ಅರಣ್ಯ ಜಮೀನು ಸಾಗುವಳಿ ಮಾಡಿದವರಿಗೆ ಪಟ್ಟಾನೀಡಿಲ್ಲ. ವಾಲ್ಮೀಕಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜಮೀನು ನೀಡಲು ಮುಂದಾಗುವ ಸರ್ಕಾರ ಈ ರೀತಿ ಅರಣ್ಯದಲ್ಲಿ ಸಾಗುವಳಿ ಮಾಡಿರುವವರಿಗೆ ಪಟ್ಟಾ ನೀಡಲು ಮುಂದಾಗಬೇಕೆಂದರು.
ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲು ಈ ಕುರಿತು ಹೋರಾಟ ತೀವ್ರಗೊಳಿಸಲು ಈ ತಿಂಗಳ 22ರಂದು ಸಂಡೂರಿನಲ್ಲಿ ಬೆಳಿಗ್ಗೆ 11ಕ್ಕೆ ವಾಲ್ಮೀಕಿ ಮಂದಿರದಲ್ಲಿ ಸಮಾವೇಶ ಹಮ್ಮಿಕೊಂಡಿದೆಂದು ತಿಳಿಸಿದರು.
ಜಿಂದಾಲ್ ಅವರು ಪಱ್ಯಾಯ ಅರಣ್ಯ ಬೆಳೆಸಲೆಂದು ಸಿರುಗುಪ್ಪ ತಾಲೂಕಿನ ದೇಶನೂರಿನ ಗಯಾಳು ಜಮೀನನ್ನು ಅರಣ್ಯ ಇಲಾಖೆಗೆ ಸೇರಿಸಿ ಅಲ್ಲಿ ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆಯುತ್ತಿದೆಂದು ಆರೋಪ ಮಾಡಿದರು.