ಅರಣ್ಯ ಇಲಾಖೆಯ ಕಾರ್ಯಾಚರಣೆ, ಕೊನೆಗೂ ಸೆರೆಯಾದ ಕಾಡಾನೆ,

ದಾವಣಗೆರೆ.ಏ.12: ಚನ್ನಗಿರಿ ತಾಲೂಕಿನ ಸೋಮಲಾಪುರದಲ್ಲಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದ ಆನೆಯನ್ನು ಮಂಗಳವಾರ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಬಳಿ ಸೆರೆ ಹಿಡಿಯಲಾಗಿದೆ.ಹಾಸನ ಜಿಲ್ಲೆಯ ಆಲೂರು ಭಾಗದಿಂದ ಬಂದಿದ್ದ ಆನೆ ಶನಿವಾರ ಚನ್ನಗಿರಿ ತಾಲೂಕಿನ ವಿವಿಧ ಗ್ರಾಮದಲ್ಲಿ ದಾಂದಲೆ ನಡೆಸಿತ್ತು. ಸೋಮಲಾಪುರ ಗ್ರಾಮದಲ್ಲಿ ಮನೆ ಮುಂದೆ ಕೆಲಸ ಮಾಡುತ್ತಿದ್ದ ಕವನಾ ಎಂಬ ವಿದ್ಯಾರ್ಥಿನಿಯನ್ನ ನೆಲಕ್ಕೆ ಅಪ್ಪಳಿಸಿದ್ದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಆನೆ ದಾಳಿಯಿಂದ ಇತರ ಮೂವರು ಗಾಯಗೊಂಡಿದ್ದರು. ಸೋಮಲಾಪುರದಲ್ಲಿ ದಾಳಿ ನಂತರ ಸೂಳೆಕೆರೆ ಇತರೆ ಭಾಗಕ್ಕೂ ನುಗ್ಗಿತ್ತು. ಶನಿವಾರದ ಸಂಜೆ ವೇಳೆಗೆ ಬಸವಾಪಟ್ಟಣ ಸಮೀಪದ ಶೃಂಗಾರ್‍ಬಾಗ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತುವಿಶೇಷವಾಗಿ ಸಕ್ರೆಬಲ್ ಬಿಡಾರದಿಂದ ಆನೆಗಳನ್ನ ಕರೆ ತರಲಾಗಿತ್ತು. ಸತತ ಕಾರ್ಯಾಚರಣೆ ನಂತರ ಜೀನಹಳ್ಳಿ ಬಳಿ ಪುಂಡಾನೆಯನ್ನ ಅರಿವಳಿಕೆ ಚುಚ್ಚುಮದ್ದು ಮದ್ದು ನೀಡುವ ಮೂಲಕ ಸೆರೆಹಿಡಿಯಲಾಗಿದೆ.