ಅರಣ್ಯ ಇಲಾಖೆಯಲ್ಲಿ 540 ವೀಕ್ಷಕರು, 310 ವಾಚರ್ ಹುದ್ದೆ ಭರ್ತಿ : ಖಂಡ್ರೆ

ಬೀದರ್:ಮೇ.17: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ವೀಕ್ಷಕರ ಹುದ್ದೆ ಹಾಗೂ 310 ವಾಚರ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಚುನಾವಣೆ ಪ್ರಕ್ರಿಯೆ ನಿಮಿತ್ಯ ನೀತಿ ಸಂಹಿತೆ ಜಾರಿ ಇರುವುದರಿಂದ ಜೂನ್ ನಾಲ್ಕರ ನಂತರ ಆಡಳಿತಾತ್ಮಕ ಅನುಮೋದನೆ ಪಡೆದು ಭರ್ತಿ ಮಾಡಲಾಗುವುದು ಎಂದು ಅರಣ್ಯ, ಪರಿಸರ, ಜೀವಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ 31 ಸಾವಿರ ಶಿಕ್ಷಕರ ವರ್ಗಾವಣೆ ಮತ್ತು 31 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದೇವೆ. ಈ ಹಿಂದೆ ಬಿಜೆಪಿ ಸರ್ಕಾರದ ಅಭ್ಯರ್ಥಿಗಳೇ ನಾಲ್ಕೈದು ಬಾರಿ ಅಧಿಕಾರದಲ್ಲಿದ್ದರು. ಆದರೆ ಅವರು ಏನೂ ಮಾಡಲಿಲ್ಲ. ಬದಲಾಗಿ ಈಗ ಒಂದೊಂದೇ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ನಿರುದ್ಯೋಗ ಸಮಸ್ಯೆ ಉದ್ಭವಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಡಾ. ಚಂದ್ರಶೇಖರ ಪಾಟೀಲ ಅವರನ್ನು ಆರಿಸಿ ತನ್ನಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈಶಾನ್ಯ ಪದವೀಧರರ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಮಾತನಾಡಿ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗಿಂತ ನಾನು ಸುಶಿಕ್ಷಿತ. ಡಾಕ್ಟರೇಟ್ ಪದವಿ ಪಡೆದಿದ್ದೇನೆ. ಎಲ್‍ಕೆಜಿ ಯಿಂದ ಪಿಜಿ ವರೆಗೆ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ಹೀಗಾಗಿ ಸಹಜವಾಗಿಯೇ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವು ನನಗಿದೆ. ಎರಡನೇ ಬಾರಿಗೆ ನನಗೆ ಆರಿಸಿ ತಂದೆ ಏಳನೇ ವೇತನ ಆಯೋಗ ಜಾರಿಗೆ ತರಲು ಶತ ಪ್ರಯತ್ನ ಮಾಡುವೆ. ಜೊತೆಗೆ ಹಳೆ ಪಿಂಚಣಿ ಯೋಜನೆ ಜಾರಿಗಾರಿ ಶ್ರಮಿಸುವೆ. ಆದ್ದರಿಂದ ನನಗೆ ಮೊದಲನೇ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ್ ಮಾತನಾಡಿ, ಡಾ. ಚಂದ್ರಶೇಖರ ಪಾಟೀಲ ಅವರಿಗೆ ಪ್ರಜ್ಞಾವಂತರಾದ ಪದವೀಧರರು ತಮ್ಮ ಅಮೂಲ್ಯವಾದ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿಕೊಂಡರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹಿಂಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ,
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಅರವಿಂದಕುಮಾರ ಅರಳಿ, ಮಾಜಿ ಶಾಸಕ ಅಶೋಕ ಖೇಣಿ, ಪ್ರಮುಖರಾದ ಸಾಗರ ಖಂಡ್ರೆ, ಧನರಾಜ ತಾಳಂಪಳ್ಳಿ, ಮಾಲಾ ಬಿ.ನಾರಾಯಣರಾವ, ಭೀಮಸೇನರಾವ ಶಿಂಧೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭೀಷೇಕ ಪಾಟೀಲ, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.