ಅರಣ್ಯಾಧಿಕಾರಿಯ ಅವಿವೇಕತನಕ್ಕೆ ಅಮಾಯಕ ಸಾಕು ಕಡವೆ ಬಲಿ..!

ಸಂಜೆವಾಣಿ ವಾರ್ತೆ
ಹನೂರು ಫೆ 20 :- ಪಿ.ಜಿ.ಪಾಳ್ಯ ವನ್ಯಜೀವಿ ವಲಯದಿಂದ ನೂತನವಾಗಿ ಪ್ರಾರಂಭವಾಗಿದ್ದ ಮಲೆ ಮಹದೇಶ್ವರ ವನ್ಯಧಾಮ ಸಫಾರಿಯಲ್ಲಿ ಪ್ರಾಣ ಪ್ರಿಯರ ಆಕರ್ಷಣೆಯಾಗಿದ್ದ ಅಮಾಯಕ ಸಾಕು ಕಡವೆಯೊಂದು ಅರಣ್ಯಾಧಿಕಾರಿಯೊಬ್ಬರ ಅವಿವೇಕತನದ ಪರಮಾವದಿಗೆ ಸಿಲುಕಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎರಡು ಮೂರು ವರ್ಷಗಳ ಹಿಂದೆ ಮಲೆ ಮಹದೇಶ್ವರ ವನ್ಯ ಧಾಮಕ್ಕೆ ಸೇರಿದ ಪಾಲಾರ್ ವನ್ಯ ಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಒಂದು ತಿಂಗಳಷ್ಟಿನ ವಯೋಮಾನದ ಗಂಡು ಕಡವೆ ಮರಿಯನ್ನು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ತಂದು ಪೆÇೀಷಿಸಿದ್ದರು. ಅವರೊಟ್ಟಿಗೆ ಅನ್ನಾಹಾರಗಳನ್ನು ಸೇವಿಸಿ ಅಕ್ಕಪಕ್ಕದ ಕಾಡಿನೊಳಗೆ ಸ್ವಚ್ಛಂದವಾಗಿ ವಿಹರಿಸಿಕೊಂಡು ರಾತ್ರಿ ಬಂದು ತಂಗುತ್ತಿತ್ತು.
ಅರಣ್ಯ ಸಿಬ್ಬಂದಿಗಳು ರಾಕಿ ಎಂದು ನಾಮಕರಣ ಮಾಡಿದ್ದರು.
ಮೂರು ವರ್ಷದ ಪ್ರಾಯದ ಅದನ್ನು ಅಲ್ಲಿಂದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ನೂತನವಾಗಿ ಪ್ರಾರಂಬಿಸಿದ್ದ ಸಫಾರಿಗೆ ತಂದಿದ್ದೆ ಅದರ ಸಾವಿಗೆ ಮುಳುವಾಯಿತೆಂದರೂ ತಪ್ಪಾಗಲಾರದು. ಸುಮಾರು ಒಂದು ವಾರಗಳ ಕಾಲ ಪಿ.ಜಿ.ಪಾಳ್ಯ ಕಳ್ಳಬೇಟೆ ತಡೆ ಶಿಬಿದಲ್ಲಿದ್ದ ಅದು ಅಲ್ಲಿನ ಸಿಬ್ಬಂದಿಗಳೊಂದಿಗೂ ಹೊಂದಿಕೊಂಡಿತ್ತಲ್ಲದೆ ಸಫಾರಿಗೆ ಬರುವವರ ಬಳಿಯು ಆಹಾರವನ್ನು ಸ್ವೀಕರಿಸಿ ಮನಕ್ಕೆ ಮುದ ನೀಡುತ್ತಿತ್ತು. ಅದು ಪ್ರಾಯದ ಗಂಡು ಕಡವೆಯಾದ್ದರಿಂದ ವಯೋ ಸಹಜ ಪ್ರಕೃತಿ ಕರೆಗೆ ಓಗೊಟ್ಟು ಸಂಗಾತಿಯ ಹುಡುಕಾಟದಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತ ರೈತರ ಜಮೀನುಳಿಗೆ ತೆರಳಿದರೂ ಯಾವುದೇ ಬೆಳೆಗೆ ಹಾನಿ ಮಾಡುವುದಾಗಿ ಮೇಯುವುದಾಗಲಿ ಮಾಡುತ್ತಿರಲಿಲ್ಲ.
ಮನುಷ್ಯರು ಸೇವಿಸುವ ಆಹಾರವನ್ನೇ ಆದು ಬಯಸುತ್ತಿದ್ದು ಅನ್ನ ಮುದ್ದೆ ಬಿಸ್ಕೆಟ್ ನೀಡಿದರೆ ತಿಂದು ಬರುತ್ತಿದ್ದಂತಹ ನಿರುಪದ್ರವಿ ಅದಾಗಿತ್ತು. ಹೀಗಿರುವಾಗಿ ಅದು ಒಮ್ಮೆ ಪಿ.ಜಿ.ಪಾಳ್ಯ ಹಾಗೂ ಕುಡುವಾಳೆ ದೊಡ್ಡಿಯ ಮಧ್ಯದ ಕಾಡಂಚಿನ ರೈತ ಸಿದ್ಧಪ್ಪಾಜಿಯವರ ತೋಟಕ್ಕೆ ಹೋಗಿ ಒಂದು ದಿನ ಅವರ ತೋಟದ ಮನೆಯ ಬಳಿ ಅವರು ಕೊಟ್ಟ ಅನ್ನಾಹಾರವನ್ನು ಸೇವಿಸಿ ಅಲ್ಲಿಯೇ ತಂಗಿತ್ತು. ನಂತರ ಮಾಲೀಕರು ಅರಣ್ಯ ಇಲಾಖೆಯವರಿಗೆ ಕರೆ ಮಾಡಿ ಕಡವೆ ಬಂದಿರುವುದನ್ನು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಡಿಎಫ್‍ಓ ಸಂತೋಷ್ ಕುಮಾರ್‍ರವರು ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಸಿಬ್ಬಂದಿಗಳಿಗೆ ಕಡವೆ ರಾಕಿಯನ್ನು ಎಳೆದೊಯ್ದು ವಡವಾರದ ಕೆರೆ ಬಳಿ ಕಟ್ಟಿ ಹಾಕಿ ಬನ್ನಿ ನೀರು ಕುಡಿಯಲು ಬರುವ ಹುಲಿಯೋ ಚಿರತೆಯೋ ತಿಂದು ಕೊಂಡು ಹೋಗಲಿ ಎಂದು ಕಡಕ್ಕಾಗಿ ಸೂಚನೆ ನೀಡಿದರೆಂಬ ಮಾಹಿತಿ ಲಭ್ಯವಾಗಿದೆ. ಅವರ ಆಜ್ಞೆಯನ್ನು ಪರಿಪಾಲಿಸಲು ಮುಂದಾದ ಡಿಆರ್‍ಎಫ್‍ಓ ಕೃಷ್ಣಪ್ಪ ನೇತೃತ್ವದಲ್ಲಿ ಗಾಡ್9ಗಳಾದ ಯಮುನಪ್ಪ, ಚಂದ್ರು, ವಿಠಲ್, ಹಾಗೂ ಹೊರಗುತ್ತಿಗೆ ವಾಚರ್‍ಗಳಾದ ಶಿವು, ಹರೀಶ್, ಮಧು, ನಂದೀಶ್‍ರವರುಗಳು ರೈತ ಸಿದ್ಧಪ್ಪಾಜಿ ಜಮೀನಿಗೆ ತೆರಳಿ ಅಲ್ಲಿ ಸುರಕ್ಷಿತವಾಗಿದ್ದ ಕಡವೆಯನ್ನು ಕತ್ತಿಗೆ ಹಗ್ಗ ಹಾಕಿ ಕಟ್ಟಿ ಎಳೆತಂದು ಜಮೀನಿನಿಂದ ಮುಂದಿನ ಕಟ್ಟೆಯೊಂದರ ಬಳಿ ಮರಕ್ಕೆ ಕಟ್ಟಿ ಹಾಕಿ ಎಲ್ಲರೂ ಉಪಹಾರ ಸೇವಿಸಲು ಬೇರೆಡೆಗೆ ತೆರಳಿದ್ದ ಸಂದರ್ಭದಲ್ಲಿ ಮರಕ್ಕೆ ಕಟ್ಟಿ ಹಾಕಿದ್ದರಿಂದ ನುಲಿದಾಡಿಕೊಂಡ ಕಡವೆ ಆಯತಪ್ಪಿ ಕಟ್ಟಯಿಂದ ಕೆಳಕ್ಕೆ ಜಾರಿ ಬಿದ್ದ ಪರಿಣಾಮ ಕುತ್ತಿಗೆಗೆ ಬಿಗಿದಿದ್ದ ಹಗ್ಗದಿಂದಾಗಿ ನೇಣು ಬಿಗಿದಂತಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲರೂ ಉಪಹಾರ ಮುಗಿಸಿ ತೆರಳಿ ನೋಡುವಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಕಡವೆ ಇಹ ಲೋಕ ತ್ಯಜಿಸಿದೆ. ನಂತರ ಸದರಿಯವರು ಘಟನೆಯನ್ನು ಡಿಎಫ್ ಓ ಸಂತೋಷ್ ಕುಮಾರ್‍ರವರ ಗಮನಕ್ಕೆ ತಂದಿದ್ದಾರೆ. ಅವರು ಮೊದಲೇ ನೀಡಿದ್ದ ಸೂಚನೆಯಂತೆ ಕಡವೆ ಮೃತ ದೇಹವನ್ನು ವಡವಾರದ ಕೆರೆ ಬಳಿ ನೇತು ಹಾಕಿ ಸಿಸಿ ಕ್ಯಾಮೆರಾ ಅಳವಡಿಸಿ ಬರುವಂತೆ ಹೇಳಿ ಕೈ ತೊಳೆದುಕೊಂಡಿದ್ದಾರೆ.
ಒಟ್ಟಾರೆ ಪ್ರಕರಣ ದಾಖಲಿಸದಿರುವುದು ಹಾಗೂ ಕಡವೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸದೆ ಪ್ರಕರಣ ಮುಚ್ಚಿ ಹಾಕಿರುವುದೇ ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಎಂಬಂತೆ ಅಕ್ರಮಕ್ಕೆ ಸ್ಪಷ್ಟ ನಿದರ್ಶನವಾಗಿದೆ. ನಿಜಕ್ಕೂ ಅವರು ಕರ್ತವ್ಯ ಪ್ರಜ್ಞೆ ಇರುವರಾದರೆ ಪ್ರಕರಣ ದಾಖಲಿಸಿ ಪಶು ವ್ಶೆದ್ಯರಿಂದ ಕಡವೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದರೆ ಅದು ಕ್ರಮ. ಅದು ಬಿಟ್ಟು ಅದನ್ನು ಬೇಕಾಬಿಟ್ಟಿ ಬಿಸಾಡಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಕಡವೆಯ ಸಾವಿಗೆ ಕಾರಣರಾಗಿರುವ ಎಲ್ಲಾ ತಪ್ಪಿತಸ್ಥರ ವಿರುದ್ದ ಇಲಾಖಾ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.