ಅರಣ್ಯಾಧಿಕಾರಿಗಳಿಂದ ದಿನಗೂಲಿ ನೌಕರರಿಗೆ ಕಿರುಕುಳ-ಆರೋಪ

ಮಂಡ್ಯ: ಜೂ.22:- ವಿಭಾಗ ವ್ಯಾಪ್ತಿಯ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ಪಿಸಿಪಿ ನೌಕರರ ನಿರಂತರ ಶೋಷಣೆ,ಸಂಬಳ ಹಣ ದುರುಪಯೋಗ, ನೌಕರರನ್ನು ಕೆಲಸದಿಂದ ತೆಗೆದಿರುವ ಕ್ರಮದ ವಿರುದ್ಧ ನ್ಯಾಯಕ್ಕಾಗಿ ಒತ್ತಾಯಿಸಿ ಅನಿರ್ದಿμÁ್ಟವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು ಆರೋಪಿಸಿದರು.
ನಗರದ ಜಿಲ್ಲಾ ಅರಣ್ಯ ಅಧಿಕಾರಿಗಳ ಕಚೇರಿ ಮುಂಭಾಗ ಅನಿರ್ದಿಷ್ಟ ಧರಣಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಿನಗೂಲಿ ನೌಕರರಿಗೆ ಕೊಡುತ್ತಿರುವ ಕಿರುಕುಳದ ಬಗ್ಗೆ ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ಯಾರೆ ಎನ್ನದೇ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ.ಈ ಹಿಂದೆ ಅಧಿಕಾರಿಗಳ ಭರವಸೆಯ ಮಾತುಗಳನ್ನು ಕೇಳಿ ಮುಷ್ಕರ ಕೈಬಿಡಲಾಗಿತ್ತು.ಹಲವಾರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದರೂ ಹಳೆಯ ಸುಳ್ಳುಗಳನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ವಲಯ ಮಟ್ಟದ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ 2021-22 ನೇ ಸಾಲಿಗೆ ನೀಡಲಾಗಿರುವ ಮಾಸಿಕ ಹೆಚ್ಚುವರಿ ಹಣವನ್ನು 22-23 ನೇ ಸಾಲಿಗೆ ಶಿಫಾರಸು ಮಾಡಬೇಕು. ಮಾಸಿಕ ಹೆಚ್ಚುವರಿ ನೀಡುವಲ್ಲಿ ಅರ್ಹ ನೌಕರರನ್ನು ಕೈಬಿಟ್ಟು ತಾರತಮ್ಯ ಮಾಡಿರುವುದು ಹಾಗೂ ವೇತನದ ವ್ಯತ್ಯಾಸ ಬಾಕಿ ಹಣ ನೀಡಬೇಕೆಂದು ಒತ್ತಾಯಿಸಿದರು.
ಶ್ರೀರಂಗಪಟ್ಟಣ ವಲಯದ ಸರೋಜಮ್ಮ, ನಾಗೇಶ, ನಂಜುಂಡಸ್ವಾಮಿ ಇವರಿಗೆ ಹೆಚ್ಚುವರಿ ಸೌಲಭ್ಯ ದೊರಕಿಸುವುದು. ಈ ವಲಯಾಧಿಕಾರಿ ಸಂಬಳದ ಬಾಬ್ತು ಚೆಕ್ ನೀಡಿದ್ದರೂ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಎಲ್ಲಾ ಚೆಕ್‍ಗಳು ವಾಪಸಾಗಿದೆ. ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೆಲವು ನೌಕರರು ಕೆಲಸ ಮಾಡಿದ ಅವಧಿಗೆ ಮಜೂರಿ ಕೇಳಿದರು ಎಂಬ ಕಾರಣಕ್ಕೆ ನೌಕರರನ್ನು ವಿನಾಕಾರಣ ಕೆಲಸದಿಂದ ತೆಗೆಯಲಾಗಿದೆ ಎಂದರು.
ಪಾಂಡವಪುರ ವಲಯದಲ್ಲಿ 18 ಜನ ಪಿಸಿಪಿ ನೌಕರರು ಕೆಲಸ ನಿರ್ವಹಿಸುತ್ತಿದ್ದು 5-6 ತಿಂಗಳು ಸಂಬಳ ದರಪಟ್ಟಿ ಮಜೂರಿ ಪಾವತಿಸದೆ ಕಡಿಮೆ ಮಜೂರಿ ಪಾವತಿಸಲಾಗಿದೆ. 2020-21, 21-22 ಹಾಗೂ 22-23 ನೇ ಸಾಲಿಗೆ ಸುಮಾರು 38 ಲಕ್ಷ ಬಾಕಿ ನೀಡಬೇಕಾಗಿದೆ. ಇದೇ ರೀತಿ ಉಳಿದ ವಲಯಗಳ ನೌಕರರಿಗೂ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದರು.
ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಗೂಲಿ ನೌಕರರು ಅನಿರ್ದಿμÁ್ಟವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ಶಿವನಂಜಪ್ಪ ಪಾರ್ಕ್ ಬಳಿಯಿಂದ ಅರಣ್ಯಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಧರಣಿಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಕನ್ಯಾ ನಾಗೇಶ್, ಉಪಾಧ್ಯಕ್ಷ ಸತೀಶ್ ಪಾಂಡವಪುರ, ಕಾರ್ಯದರ್ಶಿ ಎ.ಎಸ್. ನಂಜುಂಡಸ್ವಾಮಿ, ತುಳಸಿಕುಮಾರ್, ಶಿವಲಿಂಗಯ್ಯ, ಸರೋಜಮ್ಮ, ರಾಜಮ್ಮ ಚಿಕ್ಕೈದ ಮುಂತಾದವರು ಭಾಗವಹಿಸಿದ್ದರು.