ದಾವಣಗೆರೆ.ಜೂ.೧೭: ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಅಲೆಮಾರಿ ಕುರಿಗಾಯಿಗಳಿಗೆ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅನುಮತಿ ನೀಡಬೇಕೆಂದು ಇಂದು ದಾವಣಗೆರೆಯಲ್ಲಿ ರಾಜ್ಯ ಅಲೆಮಾರಿ ಕುರುಬರ ಕುರಿಗಾಯಿಗಳ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಎಸ್ ಗಿರೀಶ್ ನೇತೃತ್ವದಲ್ಲಿ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ದಾವಣಗೆರೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲಾಯಿತು. ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ಹೊಲಗದ್ದೆಗಳ್ಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ ಹೀಗಾಗಿ ಮೇವು ಸಿಗದೆ ಕಾರಣ ಕುರಿಗಳನ್ನು ಮೇಯಿಸಲು ತೊಂದರೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹೋದರೆ ಅರಣ್ಯ ಸಿಬ್ಬಂದಿ ಕುರಿಗಾಯಿಗಳ ಮೇಲೆ ಹಲ್ಲೆಯಂತಹ ಪ್ರಕರಣ ಬೆಳಕಿಗೆ ಬಂದಿವೆ. ಹೀಗಾಗಿ ಮಳೆಗಾಲ ಮುಗಿಯುವವರೆಗೂ ಅಲೆಮಾರಿ ಕುರಿಗಾಯಿಗಳು ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಿಸಲು ಮತ್ತು ಕುರಿಗಾಯಿಗಳು ಗೂಢಾರ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು. ಇದರಿಂದ ಕುರಿ ಹಿಕ್ಕಿ ಅರಣ್ಯ ಪ್ರದೇಶದಲ್ಲಿ ಬಿಳುವುದರಿಂದ ಅರಣ್ಯ ಪ್ರದೇಶವು ಕೂಡ ಫಲವತ್ತಾಗುತ್ತದೆ ಮತ್ತು ಯಾವುದೇ ಮರ ಅಥವಾ ಗಿಡಗಳಿಗೆ ಹಾನಿಯಾಗದಂತೆ ಕುರಿ ಮೇಸುತ್ತೇವೆ ಹೀಗಾಗಿ ಅನುಮತಿ ನೀಡುವಂತೆ ರಾಜ್ಯ ಅಲೆಮಾರಿ ಕುರುಬರ ಕುತಿಗಾಯಿಗಳ ಸಂಘ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘದ ರಾಜ್ಯ ಅಧ್ಯಕ್ಷ ಎಸ್ ಎಸ್ ಗಿರೀಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ, ಖಜಾಂಚಿ ದೀಪಕ್ ಜೋಗಪ್ಪನವರ್,ಕಾರ್ಯದರ್ಶಿ ಶ್ರೀನಿವಾಸ್ ಮೌರ್ಯ, ಪ್ರಸನ್ನ ಬೆಳಕೆರೆ, ನಲ್ಕುಂದ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.