ಅರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ. 04:- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗು ಅರಣ್ಯ ಸಚಿವ ಈಶ್ವರಖಂಡ್ರೆ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವÀ ಅರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್ ಅವರ ನೇತೃತ್ವದಲ್ಲಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಹೊರಟು, ಬಿಜೆಪಿ ವಿರುದ್ದ ಘೋಷಣೆ ಕೂಗಿದರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಬಿಜೆಪಿ ನಾಯಕರಿಗೆ ಬುದ್ದಿಭ್ರಮಣೆಯಾಗಿದೆ. ಕಳೆದ ವಿಧಾನಸಭೆಯ ಚುನಾವಣೆಯ ಸೋಲಿನಿಂದ ಹತಾಶರಾಗಿದ್ದಾರೆ. ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಖರ್ಗೆ ಅವರ ವಿರುದ್ದ ನೀಡಿರುವ ಹೇಳಿಕೆ ಅವರ ಅಪ್ರಬುದ್ದತೆಯನ್ನು ತೋರಿಸುತ್ತದೆ. ಹಿರಿಯ ದಲಿತ ನಾಯಕರಾಗಿರುವ ಖರ್ಗೆ ಅವರ ಹೆಸರನ್ನು ಹೇಳುವ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ. ಇವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಗರ ಜ್ಞಾನೇಂದ್ರ ಹಿರಿಯ ಶಾಸಕರಾಗಿ, ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕಪ್ಪು ಬಣ್ಣದವರು ಎಂದು ಹೀಳಿಸುವ ಮೂಲಕ ಅವರ ಜಾತಿಯನ್ನು ಎಳೆದು ತಂದಿದ್ದಾರೆ. ಖರ್ಗೆ ಅವರ ನಮ್ಮ ಸಮುದಾಯದ ಹಿರಿಯ ನಾಯಕರು. ಅವರನ್ನು ಕಪ್ಪು ವರ್ಣದವರು ಎಂದರೆ ಜಾತಿಯನ್ನು ನಿಂದಿಸಿದಂತೆ ಆಗಿದೆ. ಈ ಕೂಡಲೇ ಅವರ ವಿರುದ್ದ ಅಸ್ಪಶ್ಯತೆ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಗುಂಡ್ಲುಪೇಟೆ ಶಾಸಕ ಎಚ್.ಎಸ್.ಗಣೇಶ್ ಪ್ರಸಾದ್ ಮಾತನಾಡಿ, ಬಿಜೆಪಿ ಮುಖಂಡರು ಇಂಥ ಹೇಳಿಕೆಯ ನೀಡುವ ಮೂಲಕ ತಮ್ಮ ಸಂಸ್ಕøತಿ ಮತ್ತು ಪಕ್ಷದ ಅಜೆಂಡಾದ ಎಂಥದದ್ದು ಎಂಬುದನ್ನು ಸಾರ್ವಜನಿಕರಿಗೆ ತೋರ್ಪಡಿಸಿದ್ದಾರೆ. ಅಗರ ಜ್ಞಾನೇಂದ್ರ ಅವರು ಇಂಥ ಮಾತುಗಳನ್ನಾಡಿರುವುದು ಶೋಭೆಯಲ್ಲ. ಕೂಡಲೇ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ್ ಖಂಡ್ರೆ ಅವರ ಕ್ಷಮೆ ಯಾಚಿಸಬೇಕು. ಇವರ ವಿರುದ್ದ ಪ್ರಕರಣ ದಾಖಲು ಮಾಡಿದಾಗ ಮಾತ್ರ ಇಂಥ ಬಾಲಿಶ ಹೇಳಿಕೆಗಳು ಮತ್ತೊಬ್ಬ ನಾಯಕರರಿಂದ ಬರುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನ ಮತ್ತು ಅವರ ಸಾಧನೆ ಬಗ್ಗ ಅರಿವಿದ್ದರೆ ಇಂಥ ಮಾತುಗಳನ್ನಾಡುತ್ತಿರಲಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಅವಹೇಳನ ಮಾಡಿರುವ ಅರಗ ಜ್ಞಾನೇಂದ್ರ ಅವರನ್ನು ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್. ಗುರುಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಜಿ.ಪಂ.ಮಾಜಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ಸಿದ್ದಯ್ಯನಪುರ ಗೋವಿಂದರಾಜು, ಅರುÀಣ್‍ಕುಮಾರ್, ಮಹದೇವಶೆಟ್ಟಿ, ಲಿಂಗರಾಜು, ಹೊಮ್ಮ ಜಿ.ಡಿ. ಪ್ರಕಾಶ್, ಗ್ರಾ.ಪಂ. ಅಧ್ಯಕ್ಷ ಪಿ. ಶೇಖರ್, ಉಪಾಧ್ಯಕ್ಷ ಪಟೇಲ್ ಗುರುಮಲ್ಲಪ್ಪ, ಮಹೇಶ್ ಕುದರ್, ಸಿಕೆ. ರವಿಕುಮಾರ್, ಕಾಗಲವಾಡಿ ಚಂದ್ರು, ಶಿವಸ್ವಾಮಿ ಇತರರು ಇದ್ದರು.