ಅರಕೇರಾ ತಾಲೂಕು ಘೋಷಣೆ: ರದ್ದುಪಡಿಸಿ ಗಬ್ಬೂರು ಘೋಷಣೆಗೆ ಒತ್ತಾಯ

ರಾಯಚೂರು,ಜ.೬- ಅವೈಜ್ಞಾನಿಕವಾಗಿ ತಾಲೂಕನ್ನಾಗಿ ಘೋಷಿಸಿರುವ ಅರಕೇರಾ ಹೋಬಳಿಯನ್ನು ರದ್ದುಗೊಳಿ, ದೇವದುರ್ಗ ತಾಲೂಕಿನ ದೊಡ್ಡ ಹೋಬಳಿಯಾಗಿರುವ ಗಬ್ಬೂರನ್ನು ನೂತನ ತಾಲೂಕಾಗಿ ಘೋಷಿಸುವಂತೆ ಒತ್ತಾಯಿಸಿ ಗಬ್ಬೂರು ನೂತನ ತಾಲೂಕ ಪ್ರಗತಿಪರ ಸಂಘಟನೆಗಳ ಹೋರಾಟ ಒಕ್ಕೂಟ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಅಧಿಕಾರ ವಿಕೇಂದ್ರೀಕರಣದ ಫಲವನ್ನು ಪಡೆಯುವಂತಾಗಲು ಹೊಸ ರಾಜ್ಯ, ಜಿಲ್ಲೆ, ತಾಲೂಕಗಳ ರಚನೆ ಆಗಬೇಕಾಗಿರುವುದು ಅಭಿವೃದ್ಧಿ ದೃಷ್ಟಿಯಿಂದಲೇ ಹೊರತು ಅಧಿಕಾರಸ್ಥರ ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಗಬ್ಬೂರು ಮತ್ತೊಂದು ನೂತನ ತಾಲೂಕ ಎಂದು ಸರಕಾರ ಘೋಷಿಸಬೇಕೆನ್ನುವುದು ಈ ಭಾಗದ ಎಲ್ಲಾ ವರ್ಗಗಳ ಒಕ್ಕೊರಲ ಒತ್ತಾಯವಾಗಿದೆ.
ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿರುವ ಅರಕೇರಾ ಗ್ರಾಮವನ್ನು ತಾಲೂಕ ಕೇಂದ್ರವನ್ನು ರದ್ದುಪಡಿಸಿ ಗಬ್ಬೂರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ೪೫ ಗ್ರಾಮಗಳ ಗ್ರಾಮಸ್ಥರು ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸಚಿವ ಸಂಪುಟದಲ್ಲಿ ಅರಕೇರಾ ಗ್ರಾಮ ತಾಲೂಕ ಕೇಂದ್ರವನ್ನಾಗಿ ಮಾಡಲು ಘೋಷಿಸಿದ್ದು ಈ ನಿರ್ಧಾರವನ್ನು ಕೂಡಲೇ ಕೈಬಿಟ್ಟು ಗಬ್ಬೂರು ಪಟ್ಟಣವನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಿಸಬೇಕು. ಇದರಿಂದ ಸುತ್ತ – ಮುತ್ತಲಿನ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಗಬ್ಬೂರು ಪಟ್ಟಣ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ೧,೧೦,೦೦೦ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ, ೯೩,೦೦೦ ಹೆಕ್ಟರ್ ಸಾಗುವಳಿ ಭೂಮಿ ಹೊಂದಿದ್ದು , ದೇವದುರ್ಗ ತಾಲೂಕಿಗೆ ಗಡಿಭಾಗದ ಗ್ರಾಮಕ್ಕೆ ೫೫ ಕಿ.ಮೀ ಆಂತರದಲ್ಲಿದೆ. ನೀರಾವರಿ ಸೌಲಭ್ಯವನ್ನು ಹೊಂದಿರುವ ಗಬ್ಬೂರು ಪಟ್ಟಣದಲ್ಲಿ ಒಂದು ಪದವಿ ಪೂರ್ವ ಕಾಲೇಜು, ಒಂದು ಪ್ರೌಡ ಶಾಲೆ, ೮ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಸತಿ ನಿಲಯ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಸತಿ ಶಾಲೆ, ಅಲ್ಪ ಸಂಖ್ಯಾತ ವಿದ್ಯಾರ್ಥಿ ನಿಲಯ, ೨೫೦ ದಾಖಲಾತಿ ವಿದ್ಯಾರ್ಥಿಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ, ೨ ಸಾರ್ವಜನಿಕ ಗ್ರಂಥಾಲಯಗಳು, ೫೭ ಗ್ರಾಮಗಳ ಸರಹದ್ದಿನ ಪೊಲೀಸ್ ಠಾಣೆ ಗಬ್ಬೂರು, ೨೧ ಸದಸ್ಯರ ಬಲದ ಗ್ರಾಮ ಪಂಚಾಯಿತಿ, ಪಶು ವೈದ್ಯಾಲಯ, ರೈತ ಸಂಪರ್ಕ ಕೇಂದ್ರ, ನಾಡ ಕಾರ್ಯಾಲಯ, ಪ್ರವಾಸಿ ಮಂದಿರ, ಸಾರ್ವಜನಿಕ ಆರೋಗ್ಯ ಕೇಂದ್ರ, ಅಂಚೆ ಕಛೇರಿ, ವಿದ್ಯುತ್ ಕೇಂದ್ರ ೧೧೦ ಕೆ.ವಿ, ವಿದ್ಯುತ್ ಕಾರ್ಯಾಲಯ, ೧೨ ಅಂಗನವಾಡಿ ಕೇಂದ್ರಗಳು, ವಯಸ್ಕ ಶಿಕ್ಷಣ ಕೇಂದ್ರ, ಎಸ್.ಬಿ.ಐ ಬ್ಯಾಂಕ್, ಪ್ರಗತಿ ಗ್ರಮೀಣ ಬ್ಯಾಂಕ್, ಸರಕಾರಿ ಸಹಕಾರ ಬ್ಯಾಂಕ್‌ಗಳು
ವ್ಯವಸ್ಥೆ, ಸರಕಾರಿ ಮಹಿಳೆಯರ ತರಬೇತಿ ಕೇಂದ್ರ, ಸರ್ವೆ ನಂ . ೩೧೫ ರ ಬಸ್ ಡೀಪ್‌ಗೆ ೦೪ ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ, ೬ ಸಾವಿರಕ್ಕೂ ಅಧಿಕ ಮನೆ, ೨೧ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಗಬ್ಬೂರು ಪಟ್ಟಣಕ್ಕೆ ತಾಲೂಕ ಕೇಂದ್ರವನ್ನಾಗಿ ರೂಪಿಸಿದರೆ ಇನ್ನಿತರೆ ಮೂಲಭೂತ ಸೌಲಭ್ಯಗಳು ದೊರಕುವುದರಿಂದ ಸುತ್ತ – ಮುತ್ತಲಿನ ಈ ಭಾಗದ ಜನರಿಗೆ ಅನೂಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಅರಕೇರಾ ಗ್ರಾಮವು ದೇವದುರ್ಗ ಮತ್ತು ಸಿರವಾರ ತಾಲೂಕಿನ ಸಮೀಪದಲ್ಲಿದ್ದು ಎಲ್ಲಾ ಸೌಭ್ಯಗಳು ಹತ್ತಿರದಲ್ಲಿ ಸಿಗುತ್ತವೆ. ಆದ್ದರಿಂದ ಅರಕೇರಾ ಗ್ರಾಮವನ್ನು ತಾಲೂಕ ಕೇಂದ್ರವನ್ನಾಗಿಸುವ ನಿರ್ಧಾರವನ್ನು ಹಿಂಪಡೆದು ಗಟ್ಟೂರು ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಪ್ಪ ಗೌಡ ಕಾತರಕಿ, ಚನ್ನಪ್ಪಗೌಡ ಕಾಕರಗಲ್, ಸಿದ್ದಣ್ಣಗೌಡ ಕರ್ಲಿ, ನಿಜಾನಂದಪ್ಪ ಗೌಡ, ಬಸವರಾಜ ತುಪ್ಪಳ, ನಾರಾಯಣಸ್ವಾಮಿ, ಶಾಂತಪ್ಪ ಕುರುಬರು, ರಾಮಣ್ಣ ಕುಣಿ, ರವಿಕುಮಾರ ಕುಂಬಾರ, ರಾಜಪ್ಪ ಸಿರವಾರ್ ಕರ್, ಶಾಂತಕುಮಾರ ಹೊನ್ನಟಗಿ, ಮಾರೆಪ್ಪ ಮಲದಕಲ್, ಶಿವಕುಮಾರ ಗೌಡ, ನರಸಪ್ಪ ಗಣೇಕಲ್, ಬೂದೆಪ್ಪ ದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.