ಅರಕೆರೆ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶೀಘ್ರ ಚಾಲನೆ


ಹೊನ್ನಾಳಿ.ನ.೧೭; ಮುಂದಿನ ದಿನಗಳಲ್ಲಿ ಮನೆ ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಅರಕೆರೆ ಗ್ರಾಮದಲ್ಲಿ ಗ್ರಾಪಂ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ೨೦೦೮ರಲ್ಲಿ ನಾನು ಮೊದಲ ಬಾರಿ ಶಾಸಕನಾದ ಸಂದರ್ಭದಲ್ಲಿ ಅರಕೆರೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಿದ್ದೆ. ಈಗ ಸರಕಾರದ ಯೋಜನೆಯಂತೆ ಮನೆಗಳಿಗೆ ನೀರು ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಕೆರೆ ಭಾಗದಲ್ಲಿ ಇರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಇದಕ್ಕಾಗಿ ೪೯ ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆಗೆ ಸರಕಾರ ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಭಾರತದ ಚಿತ್ರಣವೇ ಬದಲಾಗಿದೆ. ಒಂದು ಕಾಲದಲ್ಲಿ ಭಾರತದ ಬಗ್ಗೆ ವಿಶ್ವದೆಲ್ಲೆಡೆ ತಾತ್ಸಾರ ಮನೋಭಾನೆ ಇತ್ತು. ಇಂದು ನರೇಂದ್ರ ಮೋದಿ ಅವರ ಸ್ವಚ್ಛ ಆಡಳಿತ ಹಾಗೂ ಇತರ ಅಂಶಗಳಿಂದ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತಿರುವುದು ಹಾಗೂ ಹಲವಾರು ಯೋಜನೆಗಳನ್ನು ಸಾಮಾನ್ಯ ಜನರಿಗಾಗಿ ರೂಪಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ, ಅಭಿವೃದ್ಧಿಯ ಹರಿಕಾರರಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸದಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಿಗೆ ಅವಶ್ಯವಾಗಿರುವ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಗ್ರಾಮದ ಯುವ ಮುಖಂಡ ಅರಕೆರೆ ನಾಗರಾಜ್ ಮಾತನಾಡಿ, ಎಂ.ಪಿ. ರೇಣುಕಾಚಾರ್ಯ ಅವರು ಶಾಸಕರಾದ ಮೇಲೆ ನಮ್ಮ ಗ್ರಾಮ ಅಭಿವೃದ್ಧಿ ಕಂಡಿದೆ. ಗ್ರಾಮದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಗ್ರಾಮದ ತೋಟ, ಹೊಲ, ಗದ್ದೆಗಳಿಗೆ ಹೋಗಿ ಬರಲು ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.ಅರಕೆರೆ ಗ್ರಾಮದಲ್ಲಿ ೩೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಈಗಾಗಲೇ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಹರಿದು ಬರಲಿದೆ ಎಂದರು.
ಜಿಪಂ ಸದಸ್ಯರಾದ ಎಂ.ಆರ್. ಮಹೇಶ್, ಸಿ. ಸುರೇಂದ್ರನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ಎಪಿಎಂಸಿ ನಿರ್ದೇಶಕ ಜಿವಿಎಂ ರಾಜು, ತಾಪಂ ಇಒ ಎಸ್.ಎಲ್. ಗಂಗಾಧರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.