ಅಯ್ಯಪ್ಪಸ್ವಾಮಿ ಭಕ್ತರಿಂದ ಇರುಮುಡಿ ಮೆರವಣಿಗೆ

ದೇವದುರ್ಗ,ಜ.೧೦- ಪಟ್ಟಣದ ಶ್ರೀಶಬರಿ ವೃತ್ತದ ಸಮೀಪದ ಅಯ್ಯಪ್ಪ ಸ್ವಾಮಿ ಮಠದಲ್ಲಿ ನೂರಾರು ಭಕ್ತರು ಮಾಲೆ ಧರಿಸಿ ವೃತ ಕೈಗೊಂಡಿದ್ದು, ಮಕರ ಜ್ಯೋತಿ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಸೋಮವಾರ ತೆರಳಿದರು.
ನೂರಾರು ಭಕ್ತರು ಮಾಲೆಧರಿಸಿ ವೃತ ಕೈಗೊಂಡಿದ್ದು, ಇರುಮುಡಿ ಹೊತ್ತ ಸ್ವಾಮಿಗಳನ್ನು ಭಕ್ತರು ಅದ್ದೂರಿ ಮೆರವಣಿಗೆ ಮಾಡಿದರು. ಆನೆಮೇಲೆ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ಸಾಗಿದರು. ನೂರಾರು ಭಕ್ತರು, ಯುವಕರು, ನಿವಾಸಿಗಳು ಇರುಮುಡಿ ಹೊತ್ತ ಭಕ್ತರಿಗೆ ನಮಸ್ಕರಿಸಿ ಬೀಳ್ಕೊಟ್ಟರು.
ಶ್ರೀಮಠದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಕೆಇಬಿ ರಸ್ತೆ, ಸಂತೆ ಬಜಾರ್, ಮಿನಿವಿಧಾನಸೌಧ ಮುಂಭಾಗ, ಸಾರ್ವಜನಿಕ ಕ್ಲಬ್ ಮೈದಾನದ ಮುಂಭಾಗ ಸೇರಿ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಾಲೆಧರಿಸಿದ ನೂರಾರು ಭಕ್ತರು, ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.