ಅಯ್ಯಪ್ಪನ ದರ್ಶನ ಅವಧಿ ೧ ಗಂಟೆ ವಿಸ್ತರಣೆ

ಶಬರಿಗಿರಿ,ಡಿ.೧೧-ಇತ್ತೀಚೆಗಷ್ಟೇ ಆರಂಭವಾದ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ತಿರುವಾಂಕೂರು ದೇವಸ್ಥಾನಂ ಮಂಡಳಿ (ಟಿಬಿಡಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನದ ಸಮಯವನ್ನು ಟಿಬಿಡಿ ಒಂದು ಗಂಟೆ ವಿಸ್ತರಿಸಿದೆ. ಪ್ರಸ್ತುತ ದಿನದಲ್ಲಿ ಸಂಜೆ ೪ ರಿಂದ ರಾತ್ರಿ ೧೧ ರವರೆಗೆ ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಮಧ್ಯಾಹ್ನ ೩ ಗಂಟೆಯಿಂದ ಆರಂಭವಾದ ದರ್ಶನ ರಾತ್ರಿ ೧೧ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಅಯ್ಯಪ್ಪ ಭಕ್ತರಲ್ಲಿ ಸಂತಸ ಮೂಡಿಸಿದೆ.
ವರ್ಚುವಲ್ ಸರತಿ ಮೂಲಕ ೯೦ ಸಾವಿರ ಬುಕ್ಕಿಂಗ್ ಆಗಿದೆ.ಪ್ರತಿ ದಿನ ಸ್ಥಳದಲ್ಲೇ ೩೦ ಸಾವಿರ ಬುಕ್ಕಿಂಗ್ ಆಗುತ್ತಿದೆ ಎಂದು ಅಯ್ಯಪ್ಪ ದೇಗುಲದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಐಜಿ ಸ್ಪರ್ಜನ್ ಕುಮಾರ್ ತಿಳಿಸಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಶೀಘ್ರ ದರ್ಶನ ಪಡೆಯುವ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾಗುತ್ತಿದೆ ಎಂದ ಅವರು ತಿಳಿಸಿದ್ದಾರೆ. ಅಯ್ಯಪ್ಪನ ದರ್ಶನದ ಸಮಯವನ್ನು ಪ್ರತಿದಿನ ೧೭ ಗಂಟೆಗಳಿಗೂ ಮೀರಿ ವಿಸ್ತರಿಸುವಂತಿಲ್ಲ ಎಂದು ಟಿಬಿಡಿ ಹೇಳಿದೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಭಕ್ತರಿಗೆ ನೀರು, ಬಿಸ್ಕತ್ ವ್ಯವಸ್ಥೆ ಮಾಡಲಾಗುತ್ತಿದೆ.
ಮಂಡಲ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನವೆಂಬರ್ ೧೬ ರಂದು ಸಂಜೆ ತೆರೆಯಲಾಗಿದೆ .ನವೆಂಬರ್ ೧೭ ರಂದು ಸ್ವಾಮಿಯ ದರ್ಶನ ಪ್ರಾರಂಭವಾಗಿದೆ. ಆಗಲೇ ಮಂಡಲ ಮಕರವಿಳಕ್ಕು ಆಚರಣೆಯೂ ಆರಂಭವಾಗಿದೆ.ಎರಡು ತಿಂಗಳ ಕಾಲ ನಡೆಯುವ ಶಬರಿಗಿರಿಯ ಅಯ್ಯಪ್ಪನ ದರ್ಶನಕ್ಕೆ ದೇಶಾದ್ಯಂತ ಭಕ್ತ ಸಾಗರವೇ ಹರಿದು ಬರುತ್ತಿದೆ.ಈ ಬಾರಿ ರಾಜ್ಯ ಸರ್ಕಾರವು ಬೆಟ್ಟದಲ್ಲಿ ಭಕ್ತರ ಸುರಕ್ಷಿತ ದರ್ಶನಕ್ಕಾಗಿ ಡೈನಾಮಿಕ್ ಕ್ಯೂ-ಕಂಟ್ರೋಲ್ ವ್ಯವಸ್ಥೆ ಮಾಡಲಾಗಿದೆ.