ಅಯೋಧ್ಯೆ: ೩ನೇ ದಿನವೂ ನೂಕುನುಗ್ಗಲು

ಲಖನೌ,ಜ.೨೫- ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ವಿರಾಜಮಾನವಾಗಿರುವ ರಾಮಲಲ್ಲನ ದರ್ಶನ ಪಡೆಯಲು ಮೂರನೇ ದಿನವೂ ನೂಕು ನುಗ್ಗಲು ಮತ್ತು ಜನಸಂದಣಿ ಎದುರಾಗಿದೆ. ಈ ನಡುವೆಯೇ ಬಾಲರಾಮನ ದರ್ಶನ ಪಡೆಯಲು ಬರುವ ಗಣ್ಯರು ಮೊದಲೇ ಮಾಹಿತಿ ನೀಡಿದರೆ ಸೂಕ್ತ ವ್ಯವಸ್ಥೆ ಮಾಡಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ರಾಮಭಕ್ತರು, ಸಾಧು ಸಂತರು ಸೇರಿದಂತೆ ದೇಶಾದ್ಯಂತ ಇರುವ ಗಣ್ಯರು, ಅತಿ ಗಣ್ಯರು ಬಾಲರಾಮನ ದರ್ಶನ ಪಡೆಯಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅತಿ ಗಣ್ಯರು, ಮತ್ತು ಗಣ್ಯರು ಮುಂಚಿತವಾಗಿಯೇ ಶ್ರೀ ರಾಮಜನ್ಮ ಭೂಮಿ ಟ್ರಸ್ಟ್‌ಗೆ ಮಾಹಿತಿ ನೀಡಿ ಎಂದು ವಿನಂತಿ ಮಾಡಿದ್ದಾರೆ.
ಮುಂದಿನ ಏಳರಿಂದ ೧೦ ದಿನಗಳಲ್ಲಿ ತಮ್ಮ ಭೇಟಿ ನಿಗದಿಪಡಿಸುವ ಮೊದಲು ಸ್ಥಳೀಯ ಆಡಳಿತ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಥವಾ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಲು ಅಯೋಧ್ಯೆಗೆ ಪ್ರವಾಸವನ್ನು ಯೋಜಿಸುತ್ತಿರುವ ವಿಐಪಿಗಳು ಮತ್ತು ಗಣ್ಯರಿಗೆ ಮನವಿ ಮಾಡಿದ್ದಾರೆ.
ಮೊದಲ ಎರಡು ದಿನ ತಲಾ ೫ ಲಕ್ಷಕ್ಕೂ ಅಧಿಕ ಮಂದಿ ರಾಮಲಲ್ಲನ ದರ್ಶನ ಪಡೆದಿದ್ದಾರೆ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಕೇಂದ್ರ ಮೀಸಲು ಪಡೆ ಭಕ್ತರನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿದೆ.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಜನಸಂದಣಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ತಡರಾತ್ರಿಯವರೆಗೆ ೨.೫ ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ಧಾರೆ.
ರಾಮ ಮಂದಿರವಷ್ಟೇ ಅಲ್ಲ, ಪಕ್ಕದ ಹನುಮಾನ್ ಗರ್ಹಿ ದೇಗುಲದಲ್ಲೂ ಭಕ್ತರ ದಂಡು ಹರಿದು ಬಂದಿತ್ತು. ಭಕ್ತರ ಪ್ರತಿಕ್ರಿಯೆಯನ್ನು ಗಮನಿಸಿ ದೇವಸ್ಥಾನದ ಆಡಳಿತ ಮಂಡಳಿಯು ದರ್ಶನದ ಸಮಯವನ್ನು ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ವಿಸ್ತರಿಸಿದೆ.
ಅಯೋಧ್ಯೆಗೆ ಭಾರೀ ದಟ್ಟಣೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಹೆದ್ದಾರಿಗಳಲ್ಲಿ ನಗರದ ಗಡಿಯಿಂದ ೧೫ ಕಿಮೀ ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಅಯೋಧ್ಯೆಯಲ್ಲಿ ಜನಸಂದಣಿ ನಿರ್ವಹಣೆಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮಮಂದಿರದ ಗರ್ಭಗುಡಿಯೊಳಗೆ ತಾತ್ಕಾಲಿಕ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಜಿಲ್ಲಾ ಪೊಲೀಸ್ ಮತ್ತು ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ ಹೆಚ್ಚುವರಿ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ” ಎಂದು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.