ಅಯೋಧ್ಯೆ ರೈಲು ನಿಲ್ದಾಣ ಮರು ಅಭಿವೃದ್ಧಿಗೆ ಕ್ರಮ

ನವದೆಹಲಿ,ನ.೧೩- ಉತ್ತರ ಪ್ರದೇಶದ ಆಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪಿಸುವ ಒಂದು ವಾರದ ಮೊದಲು ಅಯೋಧ್ಯೆ ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ರಾಮಭಕ್ತರ ಸೇವೆಗೆ ಮುಕ್ತಗೊಳಿಸಲು ಭಾರತೀಯ ರೈಲ್ವೇ ಮುಂದಾಗಿದೆ.
ಜನವರಿ ೨೨ ಕ್ಕೆ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಯಾಗಲಿದ್ದು ಅದಕ್ಕೂ ಮುನ್ನ ಜನವರಿ ೧೫ ರೊಳಗೆ ರೈಲು ನಿಲ್ದಾಣದ ಸಂಪೂರ್ಣ ಕಾಮಗಾರಿ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.
ಈ ರೈಲ್ವೆ ಜಂಕ್ಷನ್‌ನ ವಾಸ್ತುಶಿಲ್ಪ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಿಂದ ಪ್ರೇರಿತವಾಗಿದೆ. ಪರಿಷ್ಕೃತ ನಿಲ್ದಾಣದಲ್ಲಿ ಪ್ರತಿದಿನ ಸುಮಾರು ೫೦,೦೦೦ ವ್ಯಕ್ತಿಗಳ ಸಂಚಾರಕ್ಕೆ ಅನುಗುಣವಾಗಿ ರೈಲು ನಿಲ್ದಾಣ ಅಭಿವೃದ್ಧಿ ಪಡಿಸಲಾಗಿದೆ.
ರಾಮಮಂದಿರದಲ್ಲಿ ಜನವರಿ ೨೨ ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ಮತ್ತು ಅದರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವೀಕರಿಸಿದ ನಿಲ್ದಾಣ ಉದ್ಘಾಟಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ನಗರದಲ್ಲಿ ನಿಲ್ದಾಣದ ಪುನರಾಭಿವೃದ್ಧಿಯನ್ನು ೨೪೧ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನವೀಕರಿಸಿದ ನಿಲ್ದಾಣದಲ್ಲಿ ಶಾಪಿಂಗ್ ಮಾಲ್‌ಗಳು, ಕೆಫೆಟೇರಿಯಾಗಳು, ಮನರಂಜನಾ ಸೌಲಭ್ಯಗಳು ಮತ್ತು ಪಾರ್ಕಿಂಗ್ ಸ್ಥಳ ಸೇರಿದಂತೆ ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ.
ವಿನ್ಯಾಸದ ಪ್ರಕಾರ, ರೈಲು ನಿಲ್ದಾಣ ನೆಲ ಅಂತಸ್ತಿನ ಜೊತೆಗೆ ಒಟ್ಟು ೩,೬೪೫ ಚದರ ಮೀಟರ್ ವಿಸ್ತೀರ್ಣದೊಂದಿಗೆ ಎರಡು ಅಂತಸ್ತಿನ ಕಟ್ಟಡವಾಗಿದೆ. ಪ್ಲಾಟ್‌ಫಾರ್ಮ್ ಸುಧಾರಣೆ, ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುವ ಹಿನ್ನೆಲೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ರೈಲು ನಿಲ್ದಾಣ ಅಭಿವೃದ್ಧಿ ಪಡಿಸಲಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಪ್ರಯಾಣಿಕರನ್ನು ರಕ್ಷಿಸಲು ಡ್ರಾಪ್-ಆಫ್ ವಲಯದ ಮೇಲೆ ಹೆಚ್ಚುವರಿ ಮುಂಭಾಗದ ಮುಖಮಂಟಪ ಹೊಂದಿದೆ ರಚನೆಯು ಪ್ರಮಾಣೀಕೃತ ಹಸಿರು ನಿಲ್ದಾಣದ ಕಟ್ಟಡವಾಗಿರುತ್ತದೆ ಮತ್ತು ನಿಲ್ದಾಣ ಪ್ರಯಾಣಿಕರ ಪ್ರತ್ಯೇಕ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಿಲ್ಲರೆ ವ್ಯಾಪಾರ, ಕೆಫೆಟೇರಿಯಾಗಳು ಮತ್ತು ಮನರಂಜನಾ ಸೌಲಭ್ಯಗಳಿಗೆ ಸ್ಥಳಾವಕಾಶದೊಂದಿಗೆ ಒಂದೇ ಸ್ಥಳದಲ್ಲಿ ಎಲ್ಲಾ ಪ್ರಯಾಣಿಕರ ಸೌಕರ್ಯಗಳೊಂದಿಗೆ ೪ ರಿಂದ ೫ ಪ್ಲಾಟ್‌ಫಾರ್ಮ್‌ಗಳ ಮೇಲೆ ದೊಡ್ಡ ಏರ್ ಕಾನ್ಕೋರ್ಸ್ ಇರುತ್ತದೆ. ನಿಲ್ದಾಣದಲ್ಲಿ ೧೨ ಲಿಫ್ಟ್‌ಗಳು, ೧೪ ಎಸ್ಕಲೇಟರ್‍ಗಳು ಮತ್ತು ಇತರ ಪ್ರಯಾಣಿಕರ ಸೌಕರ್ಯಗಳ ಜೊತೆಗೆ ಆಹಾರ ಪ್ಲಾಜಾಗಳಿವೆ.
ನಿಲ್ದಾಣವು ನೆಲ ಅಂತಸ್ತಿನ ಜೊತೆಗೆ ಒಟ್ಟು ೩,೬೪೫ ಚದರ ಮೀಟರ್ ವಿಸ್ತೀರ್ಣದೊಂದಿಗೆ ಎರಡು ಅಂತಸ್ತಿನ ಕಟ್ಟಡವಾಗಿದೆ. ಪ್ಲಾಟ್‌ಫಾರ್ಮ್ ಸುಧಾರಿಸುವುದು ಮತ್ತು ೬ ಮೀಟರ್ ಅಗಲದ ಎರಡು ಅಡಿ ಮೇಲ್ಸೇತುವೆ ಹೊಂದಲಾಗಿದೆ.