ಅಯೋಧ್ಯೆ ರಾಮಮಯ

ರಾಮಲಲ್ಲಾ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜು, ಸಾಧು-ಸಂತರು, ಗಣ್ಯರ ಉಪಸ್ಥಿತಿ

ಆಯೋಧ್ಯೆ,ಜ,೨೧- ದೇಶ ಮಾತ್ರವಲ್ಲ ವಿದೇಶದ ವಿವಿಧ ಭಾಗಗಳಲ್ಲಿರುವ ರಾಮಭಕ್ತರು ಬೆರಳ ತುದಿಯ ಮೇಲೆ ಕಾಯುತ್ತಿದ್ದ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ಉತ್ತರ ಪ್ರದೇಶದ ಆಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಮನ ಊರು ಸಕಲ ರೀತಿಯಲ್ಲಿ ಸಿಂಗಾರಗೊಂಡಿದೆ. ಇಡೀ ಅಯೋಧ್ಯೆಯ ನಗರಿ ರಾಮಮಯವಾಗಿದೆ. ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ರಾಮನ ಜಪ ಅನುರಣಿಸುತ್ತಿದೆ.

ನಾಳೆ ಮದ್ಯಾಹ್ನ.೧೨.೩೦ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು ಈ ಐತಿಹಾಸಿಕ ಕ್ಷಣ ಕಣ್ಣು ತುಂಬಿಕೊಳ್ಳಲು ಇಡೀ ಜಗತ್ತು ಕಾತುರವಾಗಿದೆ.ಅದರಲ್ಲಿಯೂ ಜಗತ್ತಿನ ಮೂಲೆ ಮೂಲೆಗಳಲ್ಲಿ ಭಾರತೀಯರು, ರಾಮಮಂದಿರಕ್ಕೆ ಹೋರಾಟ ಮಾಡಿದ ಮಂದಿ ಆನಂದದ ಕ್ಷಣಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ದೇಶದ ವಿವಿಧ ರಾಜಕೀಯ ಪಕ್ಷಗಳ ಆಹ್ವಾನಿತರು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಸರಿ ಸುಮಾರು ೮ ಸಾವಿರಕ್ಕೂ ಹೆಚ್ಚು ಜನರನ್ನು ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಸರಿ ಸುಮಾರು ೫೦೦ ವರ್ಷಗಳ ಕನಸು ನನಸಾಗು ಕ್ಷಣವನ್ನು ಇಡೀ ದೇಶಾದ್ಯಂತ ಆಚರಿಸಲು ಮತ್ತು ಸಂಭ್ರಮಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೇಶದ ಪ್ರಮುಖ ದೇವಾಲಯಗಳಲ್ಲಿ ರಾಮನ ಪ್ರಾನ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯಲಿದೆ. ಇದಕ್ಕಾಗಿ ಇಂದಿನಿಂದಲೇ ಅಂತಿಮ ಸಿದ್ಧತೆ ಮಾಡಿಕೊಳ್ಳಾಗಿದೆ.

ರಾಮನೂರಿನಲ್ಲಿ ಎತ್ತ ನೋಡಿದರೂ ಶ್ರೀರಾಮನ ಆಳೆತ್ತರದ ಕಟೌಟ್‌ಗಳು ಗೋಡೆಗಳ ಮೇಲೆ ರಾಮನ ಚಿತ್ರಗಳು, ಕೇಸರಿ ಬಾವುಟಗಳಿಂದ ರಾರಾಜಿಸುತ್ತಿವೆ. ನಾಳೆ ಆಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ಇದನ್ನು ನೇರವಾಗಿ ಹಾಗು ಟಿವಿ ಪರದೆಯ ಮೇಲೆ ಕಣ್ಣುತುಂಬಿಕೊಂಡು ಪುನೀತರಾಗಲು ಕೋಟ್ಯಂತರ ರಾಮಭಕ್ತರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಈಗಾಗಲೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಾಣ ಮಾಡಿರುವ ರಾಮಲಲ್ಲನ ಪ್ರತಿಮೆಯನ್ನು ಮಂದಿರ ಒಳಗೆ ಇರಿಸಲಾಗಿದೆ. ಜೊತೆಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮಮಂದಿರದ ಉದ್ಘಾಟನೆ ನಡೆಯಲಿದೆ.

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಕಚೇರಿಗಳು, ಸಂಸ್ಥೆಗಳಿಗೆ ನಾಳೆ ಅರ್ಧ ದಿನದ ರಜೆ ಘೋಷಿಸಲಾಗಿದ್ದು, ಐತಿಹಾಸಿಕ ಕ್ಷಣ ಕುಣ್ತುಂಬಿಕೊಳ್ಳಲು ಕೇಂದ್ರ ಸರ್ಕಾರವೂ ಅವಕಾಶ ಮಾಡಿಕೊಟ್ಟಿದೆ.

ಮಂಗಳವಾರದಿಂದ ಭಕ್ತರಿಗೆ ದರ್ಶನ

ಶ್ರೀರಾಮಂದಿರವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ, ಶ್ರೀರಾಮ ಲಲ್ಲನಾ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತದ ಮಂಗಳವಾರದಿಂದ ರಾಮಮಂದಿರಕ್ಕೆ ಭಕ್ತರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ಶ್ರೀರಾಮನ್ಮ ಭೂಮಿ ಟ್ರಸ್ಟ್ ಸಕಲ ಸಿದ್ದತೆ ಮಾಡಿಕೊಂಡಿದೆ.

ನಾಳೆ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಮಹಾಮಸ್ತಕಾಭಿಷೇಕ ಸಮಾರಂಭದ ಅಂತಿಮ ಸಿದ್ಧತೆಯ ನಡೆದಿದೆ. ರಾಮಮಂದಿರ ಉದ್ಘಾಟನೆಯ ಬಳಿಕ ಕನಿಷ್ಠ ಒಂದು ಲಕ್ಷ ಮಂದಿ ಪ್ರತಿದಿನ ರಾಮಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಪೊಲೀಸರ ಸರ್ಪಗಾವಲು

ನಾಳೆ ರಾಮಮಂದಿರ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ಇಡೀ ಆಯೋಧ್ಯೆ ನಗರದಲ್ಲಿ ಪೊಲೀಸರ ಹದ್ದಿನ ಕಣ್ಣಿನೊಂದಿಗೆ ಎಲ್ಲೆಲ್ಲೂ ಸರ್ಪಗಾವಲು ಹಾಕಲಾಗಿದೆ. ಪ್ರಮುಖ ಬೀದಿಗಳಲ್ಲಿ ಸಿಸಿಟಿವಿ ಸಂಪರ್ಕ ಕಲ್ಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಗಣ್ಯಾತಿ ಗಣ್ಯರು ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತರಕ ಘಟನೆಗೆ ಅವಕಾಶ ಮಾಡಿಕೊಡಬಾರದು ಎನ್ನುವ ಉದ್ದೇಶದಿಂದ ಕಮಾಂಡೋ,ಎನ್‌ಸಿಜಿ ಹಾಗೂ ಖಾಕಿ ಪಡೆಗಳನ್ನು ನಿಯೋಜಿಸಲಾಗಿದೆ.

ರಾಮಮಂದಿರ ಉದ್ಘಾಟನೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಕರ್ತವ್ಯಕ್ಕೆ ಎಸ್‌ಪಿಜಿ ಸಿಬ್ಬಂದಿ, ೧೦೦ ಮಂದಿಯ ಎಸ್‌ಎಸ್‌ಎಫ್ ಕಮಾಂಡೋ ಪಡೆ, ಮಂದಿರ ಪರಿಸರದಲ್ಲಿ ಒಟ್ಟು ೧,೪೦೦ ಎಸ್‌ಎಸ್‌ಎಫ್ ಗಸ್ತು ನಿಯೋಜಿಸಲಾಗಿದೆ.

ಮಂದಿರ ಹೊರಗೆ ಸಿಆರ್ ಪಿಎಫ್ ಯೋಧರ ಭದ್ರತೆ ಒದಗಿಸಲಾಗಿದೆ. ಮಂದಿರ ಹೊರಗಿನ ರೆಡ್ ಝೋನ್‌ನಲ್ಲಿ ಪಿಎಸಿ, ಸಿವಿಲ್ ಪೊಲೀಸ್, ಅಯೋಧ್ಯೆಯಲ್ಲಿ ಒಟ್ಟು ೨೫ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಡ್ರೋನ್, ಸಿಸಿಟಿವಿ, ಎಐ ತಂತ್ರಜ್ಞಾನದ ಮೂಲಕ ನಿಗಾ ಇರಿಸಲಾಗಿದೆ ಎಂದು ತಿಳಿಸಲಾಗಿದೆ.

೧೧ ಸಾವಿರ ಮಂದಿ ಭಾಗಿ

ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮಮಂದಿರದ ಉದ್ಘಾಟನೆಗಾಗಿ ಅಯೋಧ್ಯೆ ನಗರಿ ದೇಶದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ದೇಶ-ವಿದೇಶಗಳ ೧೧ ಸಾವಿರ ವಿವಿಐಪಿಗಳು ರಾಮನೂರಿಗೆ ಆಗಮಿಸುವ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಭೂಮಿ, ನೀರು, ವಾಯುಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ಅಯೋಧ್ಯೆ ಮೇಲೆ ದಾಳಿ ನಡೆಸೋದಾಗಿ ಖಲಿಸ್ಥಾನ್ ಉಗ್ರ ಪನ್ನೂನ್ ಎಚ್ಚರಿಕೆ ಮೇಲೆ ಎಚ್ಚರಿಕೆ ನೀಡ್ತಿದ್ದಾನೆ. ಇದರ ಜೊತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಷ್ ದಾಳಿ ನಡೆಸುವ ಸಂಭವ ಇದೆ ಎಂದು ಗುಪ್ತಚರ ಪಡೆಗಳು ಎಚ್ಚರಿಸಿವೆ. ಹೀಗಾಗಿ ಅಯೋಧ್ಯೆಯಲ್ಲಿ ಗರಿಷ್ಠ ಮಟ್ಟದ ಮಟ್ಟದ ನಿಗಾ ವಹಿಸಲಾಗಿದೆ. ರಾಮಮಂದಿರದ ಬಳಿ ಮೂರು ಹಂತದ ಭದ್ರತೆ ಒದಗಿಸಲಾಗಿದೆ.

ಅಯೋಧ್ಯಾ ನಗರಿಯಲ್ಲಿ ಭದ್ರತಾ ಪಡೆಗಳ ಪ್ಯಾಟ್ರೋಲಿಂಗ್ ಹೆಚ್ಚಿದೆ. ಸರಯೂ ನದಿಯಲ್ಲಿ ಸೆಕ್ಯೂರಿಟಿ ಬೋಟ್‌ಗಳು ಸಂಚರಿಸ್ತಿವೆ. ಡ್ರೋನ್‌ಗಳ ಮೂಲಕ ವೈಮಾನಿಕ ನಿಗಾ ಕೂಡ ಇರಿಸಲಾಗಿದೆ. ಅಯೋಧ್ಯೆ ನಗರಿಯ ಮುಖ್ಯ ವೃತ್ತ ಲತಾ ಮಂಗೇಷ್ಕರ್ ವೃತ್ತವಂತೂ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳಿಂದ ತುಂಬಿ ಹೋಗಿದೆ. ಎಲ್ಲರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.