ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ; ವಿಜಯಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಸಂಜೆವಾಣಿ ವಾರ್ತೆ,
ವಿಜಯಪುರ, ಜ.22 :ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ವಿಜಯಪುರದಲ್ಲಿ ಗಲ್ಲಿ ಗಲ್ಲಿಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ನಗರದಲ್ಲಿ ಇರುವ ಸಿದ್ದೇಶ್ವರ ದೇವಸ್ಥಾನ, ರಾಮ ಮಂದಿರ, ಲಕ್ಷ್ಮಿ ದೇವಸ್ಥಾನ, ಶಂಕರಲಿಂಗ ದೇವಸ್ಥಾನ ಮುಂತಾದ ಪ್ರಮುಖ ದೇವಸ್ಥಾನಗಳಲ್ಲಿ ವಿದ್ಯುತ್ ಅಲಂಕಾರ, ಬೆಳ್ಳಂಬೆಳಗ್ಗೆ ವಿಶೇಷ ಪೂಜೆ, ಪುರಸ್ಕಾರ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು.
ದಿವಟಗೇರಿ ಬಡಾವಣೆಯ ರಾಘವೇಂದ್ರ ಮಠದಲ್ಲಿ ಶ್ರೀ ರಾಮನ ಮೂರ್ತಿ ಪಲ್ಲಕ್ಕಿ ಉತ್ಸವ ಮಾಡಲಾಯಿತು.
ಶ್ರೀ ರಾಮ ಹಾಗೂ ಹನುಮನ ಧ್ವಜ ಹಿಡಿದುಕೊಂಡು ರಾಮ ಭಕ್ತರು ಜೈ ಶ್ರೀ ರಾಮ, ಜೈ ಹನುಮಾನ ಎಂದು ಘೋಷಣೆ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಪ್ರತಿ ಮನೆ ಮನೆಗಳಲ್ಲೂ ವಿಶೇಷವಾಗಿ ರಾಮನ ಪೂಜೆ, ಪುರಸ್ಕಾರ ನೆರವೇರಿಸಲಾಯಿತು. ಎಲ್ಲರ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.