ಅಯೋಧ್ಯೆಯಲ್ಲಿ ಮರಳಿನ ಸೇವೆ ಮಾಡಿದ ಹರಪನಹಳ್ಳಿ ಕರಸೇವಕರು.


ಕರಿಬಸಪ್ಪ ಪರಶೆಟ್ಟಿ,
ಸಂಜೆವಾಣಿವಾರ್ತೆ
ಹರಪನಹಳ್ಳಿ.ಜ.21; ಕಳೆದ 1992ರ ಡಿ.6ರಂದು ಅಯೋಧ್ಯೆಯಲ್ಲಿ ಹರಪನಹಳ್ಳಿ ಕರಸೇವಕರಿಗೆ ನಿರ್ವಹಿಸಿದ ಪ್ರಕಾರ ಸರಯೂ ನದಿಯಲ್ಲಿ ಸ್ನಾನ ಮಾಡಿ,  ಮರಳು(ಉಸುಕು)ನ್ನು ತಂದು ರಾಮಜನ್ಮ ಭೂಮಿ ಸ್ಥಳದಲ್ಲಿ ಹಾಕಿ ಸಾರ್ಥಕ ಸೇವೆ ಸ್ಮರಿಸಿಕೊಳ್ಳುತ್ತಾರೆ ಹರಪನಹಳ್ಳಿಯ ಕರಸೇವಕರು.
ಕಳೆದ 31 ವರ್ಷಗಳ ಹಿಂದೆ ಅಯೋದ್ಯೆಯಲ್ಲಿ ಕರಸೇವೆ ಮಾಡಿ, ನಮ್ಮ ಪರಂಪರೆ ಸಂಸ್ಕೃತಿಯನ್ನು ಎತ್ತಿಹಿಡಿದ ತೃಪ್ತಿ ಇದೆ, ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಕರಸೇವೆ ಮಾಡಬೇಕೆಂದು ನಿಗದಿಯಾಗಿತ್ತು. ಆ ಸಂದರ್ಭಕ್ಕೆ ತೆರಳಲು ಪಟ್ಟಣದಿಂದ 12ಕ್ಕು ಹೆಚ್ಚು ಕರಸೇವೆಕರು 1992 ನವೆಂಬರ್ 29 ರಂದು ಬಳ್ಳಾರಿಯಿಂದ ಗುಂತಕಲ್ ಮೂಲಕ ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.
ಹರಪನಹಳ್ಳಿಯಿಂದ ಬಿ.ಕೃಷ್ಣಮೂರ್ತಿ, ನಿರಂಜನ, ಶ್ರೀಕಾಂತ, ಮಲ್ಲಿಕಾರ್ಜುನ ಪಾಟೀಲ್, ಮಹಾದೇವಜ್ಜ, ಯರಿಸ್ವಾಮಿ ರೆಡ್ಡಿ, ಪ್ರಸನ್ನಾಚಾರ್ಯ, ಸುರೇಂದ್ರ ಮಂಚಾಲಿ, ಎಸ್.ಆರ್.ಸುಬ್ಬಣ್ಣ, ಮಾಡ್ಲೀಗೆರಿ ಕೊಟ್ರೇಶ್, ಪಶುಪತಿಗೌಳಿ, ಹೊಟೇಲ್ ಜಯಣ್ಣ, ಸಿದ್ದರೂಢರವರು ಡಿಸೆಂಬರ್ 1ಕ್ಕೆ ಅಯೋದ್ಯೆಗೆ ತೆರಳಿದ ಇವರು ರಾಜ್ಯವಾರು ನಿಗಧಿಪಡಿಸಿದ್ದ ಟೆಂಟ್‍ನಲ್ಲಿ ವಾಸ್ತವ್ಯ ಹೂಡಿದರು. 1 ರಿಂದ 6 ರವರೆಗೆ ಭಾಷಣ, ಪ್ರವಚನ, ಭಜನೆ, ದಿನನಿತ್ಯ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕರಸೇವೆ ಮುಗಿಸಿದ ಅವರು ಡಿ.7ರಂದು ಬೆಳಿಗ್ಗೆ ಹೊರಟು ಡಿ.9ರಂದು ಹರಪನಹಳ್ಳಿ ವಾಪಸ್ಸಾದರು.
ಜ.22ರಂದು ಅಯೋದ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗಿ, ಶ್ರೀರಾಮನ ಮೂರ್ತಿ ಪ್ರತಿಸ್ಥಾಪನೆಯಾಗುತ್ತಿರುವುದು ನಮ್ಮ ಅಳಿಲು ಸೇವೆ ಸಾರ್ಥಕವಾಗಿದೆ ನಮ್ಮ ಪರಂಪರೆ ಸಂಸ್ಕೃತಿ ಎತ್ತಿ ಹಿಡಿದ ನೆಮ್ಮದಿ ಇದೆ ಎಂದು ಇಲ್ಲಿನ ಕರಸೇವಕರು ನೆನಪಿಸಿಕೊಳ್ಳುತ್ತಿದ್ದಾರೆ.
ಕೋಟ್
ಕರ್ನಾಟಕದವರಿಗೆ ಫೆಬ್ರವರಿಯೊಳಗೆ ಬರಲಿಕ್ಕೆ ತಿಳಿಸಿದ್ದು, ಆ ಪ್ರಕಾರ ಅಯೋಧ್ಯೆಗೆ ಅಂದಿನ ಕರಸೇವಕರಾದ ನಾವು ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇವೆ.
ಪಶುಪತಿಗೌಳಿ- ಕರಸೇವಕ ಹರಪನಹಳ್ಳಿ.