ಅಯೋಧ್ಯೆಗೆ ವಿಶೇಷ ರೈಲು ಓಡಾಟಕ್ಕೆ ಓತ್ತಾಯ : ಸಂಸದ ಡಾ. ಜಿ.ಎಂ. ಸಿದ್ದೇಶ್ವರ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.೧೧; ಅಯೋಧ್ಯೆಗೆ ದಾವಣಗೆರೆ ಮಾರ್ಗವಾಗಿ ವಿಶೇಷ ರೈಲು ಓಡಾಟಕ್ಕೆ ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ ರೈಲ್ವೆ ಸಚಿವ  ಅಶ್ವಿನಿ ವೈಷ್ಣವ್‌ರವರಿಗೆ  ದೆಹಲಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಈಗಾಗಲೇ ವಿಶ್ವದ ಗಮನ ಸೆಳೆದಿರುವ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ರಾಜ್ಯದಿಂದ ಈಗಾಗಲೇ ಘೋಷಣೆ ಮಾಡಿರುವ ವಿಶೇಷ ರೈಲುಗಳು ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ ಮಾರ್ಗದಲ್ಲಿ ಹಾಗೂ ಬೆಂಗಳೂರು ಮತ್ತು ಮೈಸೂರು ಕಡೆಯಿಂದ ಹೊರಡುವ ರೈಲುಗಳು ಚಿತ್ರದುರ್ಗ-ರಾಯದುರ್ಗ ಮುಖಾಂತರ ಹೊಸಪೇಟೆ ತಲುಪಿ ಅಲ್ಲಿಂದ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಲಿವೆ.ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆ ಮೂಲಕ ವಿಶೇಷ ರೈಲುಗಳು ಇಲ್ಲದಿರುವುದರಿಂದ ಈ ಭಾಗದ ಭಕ್ತರಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಬೆಂಗಳೂರು ಅಥವಾ ಮೈಸೂರು ಕಡೆಯಿಂದ ಹೊರಡುವ ವಿಶೇಷ ರೈಲುಗಳು ಅರಸೀಕೆರೆ-ಚಿಕ್ಕಜಾಜೂರು-ದಾವಣಗೆರೆ-ಹರಪನಹಳ್ಳಿ ಹಾಗೂ ಕೊಟ್ಟೂರು ಮಾರ್ಗವಾಗಿ ಹೊಸಪೇಟೆ ತಲುಪಿ ಅಯೋಧ್ಯೆ ಕಡೆ ಪ್ರಯಾಣ ಬೆಳೆಸುವಂತೆ ವ್ಯವಸ್ಥೆಯಾಗಬೇಕೆಂದು ಸಂಸದರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರಿಗೆ ವಿವರಿಸಿದ್ದಾರೆ.