ಅಯವ್ಯಯವನ್ನು ರಾಜಕೀಯಕ್ಕೆ ಬಳಸಿಕೊಂಡ ಸಿಎಂ

ಕಲಬುರಗಿ:ಜು.8: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯವ್ಯಯವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ರವರು ಟೀಕಿಸಿದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕಾಂಗ್ರೆಸ್ಸಿನ ಗ್ಯಾರಂಟಿ ವರ್ಣನೆಗೆ ಬಜೆಟ್ ಮೀಸಲಿಟ್ಟಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿಗೆ ಸ್ಪಷ್ಟತೆಯಿಲ್ಲದ ನಿರಾಶಾದಾಯಕ ಬಜೆಟ್ ಇದಾಗಿದೆ. ಶೋಷಿತರು,ಬಡವರು, ಕೃಷಿಕರಿಗೆ ಶಕ್ತಿ ತುಂಬುವ ಯಾವ ಯೋಜನೆಯೂ ಇಲ್ಲ.ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ ಅನೇಕ ಜನಪರ ಮತ್ತು ಪ್ರಗತಿಪರ ಯೋಜನೆಗಳನ್ನು ಕೈ ಬಿಟ್ಟಿರುವುದು ಖಂಡನೀಯ ಎಂದರು. ಮುಖ್ಯಮಂತ್ರಿಗಳು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ಸಿಗೊಳಿಸಲು ಹಣ ಹೊಂದಿಸಿದಂತೆ ಭಾಸವಾಗುತ್ತದೆ ಎಂದರು.ತೆರಿಗೆ ಹೆಚ್ಚಳ ಅತಿಯಾಗಿದೆ.ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಬಿದ್ದಂತಾಗಿದೆ.ಗ್ಯಾರಂಟಿ ಜಾರಿಗಾಗಿ ಬೇರೆ ಇಲಾಖೆಗಳಿಗೆ ಕಡಿಮೆ ಅನುದಾನ ಮೀಸಲಿಟ್ಟಿದ್ದಾರೆ. ಅತ್ಯಂತ ವಿಫಲವಾದ ಬಜೆಟ್ ಮಂಡಿಸಿದ್ದಾರೆ.ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ಕಡಿತ ಮಾಡಿರುವುದು ದುರಂತ.ಜನಸಾಮಾನ್ಯರ ಬಗ್ಗೆ ಕಾಂಗ್ರೆಸ್‍ಗೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಆದರೆ ಜಿಲ್ಲೆಯ ಮಟ್ಟಿಗೆ ಇದು ನಿರಾಶಾದಾಯಕ. ನೀರಾವರಿ ಯೋಜನೆಗೆ ನಿಗದಿತ ಅನುದಾನ ನೀಡಬೇಕಿತ್ತು.ಅಡುಗೆ ಅನಿಲ ದರವನ್ನು ಏರಿಸುವುದರ ಮೂಲಕವಾಗಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ ಎಂದು ಅವರು ಹೇಳಿದರು.