ಅಮ್ಮ ಸಂಸ್ಥೆಯಿಂದ ಮಾಸ್ಕ್ ಮತ್ತು ಗ್ಲೌಸ್ ವಿತರಣೆ

ಹಗರಿಬೊಮ್ಮನಹಳ್ಳಿ:ಮೇ.29 ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಫ್ರೆಂಟ್‍ಲೈನ್ ವಾರಿಯರ್ಸ್‍ಗಳಿಗಾಗಿ ವಿತರಿಸಲು ಅಮ್ಮ ಸಂಸ್ಥೆ ವತಿಯಿಂದ ಎನ್-95 ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ತಹಸೀಲ್ದಾರ್ ಶರಣಮ್ಮಗೆ ವಿತರಿಸಲಾಯಿತು.
ಅಮ್ಮ ಸಂಸ್ಥೆ ನೀಡಿರುವ ಎನ್-95 ಮಾಸ್ಕ್ ಮತ್ತು ಗ್ಲೌಸ್‍ಗಳು ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಇವು ಅತ್ಯವಶ್ಯಕವಾಗಿ ಬೇಕಾಗಿದ್ದವು. ಅಮ್ಮ ಸಂಸ್ಥೆ ಇವುಗಳನ್ನು ಉಚಿತವಾಗಿ ನೀಡುವ ಮೂಲಕ ನಮ್ಮ ಫ್ರೆಂಟ್‍ಲೈನ್ ವಾರಿಯರ್ಸ್‍ಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ ಅಮ್ಮ ಸಂಸ್ಥೆಗೆ ಇನ್ನು ಹೆಚ್ಚು ಹೆಚ್ಚು ಸಮಾಜ ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದರು.
ಅಮ್ಮ ಸಂಸ್ಥೆಯ ಸಂಸ್ಥಾಪಕಿ ಸಾಹೀರಾಬಾನು ಮಾತನಾಡಿ ಇಡೀ ಮನುಕುಲವೇ ಕಂಗೆಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವಂತಹ ದುರ್ಗತಿಬಂದಿರುವ ಇಂತಹ ಸಂಕಷ್ಟದ ಸಮಯದಲ್ಲೂ ಸಹ ತಮ್ಮ ಕುಟುಂಬ ವರ್ಗವನ್ನು ಲೆಕ್ಕಿಸದೇ ಜೀವ ಪಣಕ್ಕಿಟ್ಟು ಸಾರ್ವಜನಿಕರ ಸೇವೆಗೆಂದೇ ನಿತ್ಯ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು, ಕಂದಾಯ ಹಾಗೂ ಪೊಲೀಸ್ ಇಲಾಖೆ ಯವರು ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್‍ಗಳಾಗಿ ಸಾರ್ವಜನಿಕರ ಸುರಕ್ಷತೆ ಹಾಗೂ ಜೀವ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸುರಕ್ಷತಾ ಸಾಧನಗಳ ಕೊರತೆ ಇರುವುದನ್ನು ಗಮನಿಸಿ ಅವರಿಗೆ ಅನುಕೂಲವಾಗಲೆಂದು ಎನ್-95 ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಸಂಸ್ಥೆವತಿಯಿಂದ ವಿತರಿಸುವ ಮೂಲಕ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಆಶಾ, ನಜ್ಮಾ, ಆಸ್ಮಾ, ಕೆ.ಬಾಳಮ್ಮ, ಖಾಸಿಂಬೀ, ಭಾರತಿಬಾಯಿ, ಟಿ.ರೇಣುಕಾ, ರತ್ನಮ್ಮ, ಟಿ.ಬಾನುಬೀ, ಇಮಾಮ್‍ಬೀ, ಸೀಮಾ, ಪದ್ಮಾವತಿ, ಹಾತೀಮಾ, ಪೋಟೋಗ್ರಾಫರ್ ರಫೀ ಮತ್ತಿತರರು ಇದ್ದರು.