ಅಮ್ಮನ ಶವ ಸಂಸ್ಕಾರಕ್ಕೆ ವಿದೇಶದಿಂದ ಬಂದ ಮಗನೂ ಹೆಣವಾದ

ಬೀದರ:ಜೂ.1: ಅಮ್ಮನಿಗೆ ಕರೊನಾ ಸೋಂಕು ತಗುಲಿ ಸತ್ತು ಹೋದಳು ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಿದೇಶದಲ್ಲಿದ್ದ ಮಗ ತವರಿಗೆ ಬಂದಿದ್ದ. ಇದೀಗ ಆ ಮಗನೂ ದುರಂತ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ಬೀದರ್​ ಜಿಲ್ಲೆಯಲ್ಲಿ ಸಂಭವಿಸಿದೆ.

ಬೀದರ್ ನಗರದ ಬಸವ ನಗರ ನಿವಾಸಿ ಪಾರ್ವತಿ ಶೇಷಪ್ಪ ಪಾಟೀಲ(55) ಮತ್ತು ಇವರ ಪುತ್ರ ಶಿವಕಾಂತ ಪಾಟೀಲ್ (30) ಮೃತ ದುರ್ದೈವಿಗಳು. ಶಿಕ್ಷಕಿಯಾಗಿದ್ದ ಪಾರ್ವತಿ ಅವರು ಇತ್ತೀಚಿಗೆ ಕರೊನಾ ಸೋಂಕಿಗೆ ಬಲಿಯಾದರು.ಕೆನಡಾದಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ​ಶಿವಕಾಂತ ಪಾಟೀಲ್​ ಅಮ್ಮನ ಸಾವಿನ ಸುದ್ದಿ ಕೇಳಿ ಬೀದರ್​ಗೆ ಬಂದಿದ್ದರು.

ಆಗ ಶಿವಕಾಂತ ಪಾಟೀಲ್​ಗೂ ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಬೀದರ್​ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶಿವಕಾಂತ ಕೊನೆಯುಸಿರೆಳೆದಿದ್ದಾರೆ.ತಾಯಿ-ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.