ಅಮೇರಿಕ ನೆಲದಲ್ಲಿ ಸರ್ವ ಧರ್ಮಗಳನ್ನು ಎತ್ತಿ ಹಿಡಿದ ಭಗವದ್ಗೀತೆ ಜಾಗತಿಕ ಶ್ರೇಷ್ಠತೆಯನ್ನು ಸಾರಿದ ವಿವೇಕಾನಂದರು: ಮೂಲಗೆ

ಕಲಬುರಗಿ ಜ.13: ಅಮೇರಿಕದ ಚಿಕ್ಯಾಗೋ ನೆಲದಲ್ಲಿ ಭಗವದ್ಗೀತೆ ಹಿಂದೂ ಧರ್ಮ ಗ್ರಂಥದ ಜಾಗತಿಕ ಶ್ರೇಷ್ಠತೆಯನ್ನು ಸಾರಿದ ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಸರ್ವರೂ ಪ್ರೇರಿತರಾಗಬೇಕು ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮಚೇಂದ್ರನಾಥ್ ಮೂಲಗೆ ಅವರು ಇಲ್ಲಿ ಕರೆ ನೀಡಿದರು.
ಮಂಗಳವಾರ ನಗರದ ಕೇಂದ್ರ ಕಾರಾಗೃಹದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ನಿರಂತರ ಯೋಗ ಚಟುವಟಿಕೆಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಾಗೆ ನೋಡಿದರೆ ಭಾರತದಿಂದ ಅಮೇರಿಕಕ್ಕೆ ಬಂದ ಸನ್ಯಾಸಿಯ ಕುರಿತು ಜಾಗತಿಕ ವಿವಿಧ ಧಾರ್ಮಿಕ ಗುರುಗಳು ಸಾಮಾನ್ಯನಂತೆ ಕಂಡಿದ್ದರು. ಅಂತಹ ಸಂದರ್ಭದಲ್ಲಿಯೂ ಸಹ ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿವೇಕಾನಂದರು ಸಾರಿದರು ಎಂದರು.
ಅಮೇರಿಕದ ಧಾರ್ಮಿಕ ಸಂಸತ್ತಿನಲ್ಲಿ ವಿವಿಧ ದೇಶಗಳವರು ತಮ್ಮ ತಮ್ಮ ಗ್ರಂಥಗಳನ್ನು ಮೇಲಕ್ಕೆ ಇಟ್ಟು ಪರಿಚಯಿಸಿದರು. ಒಬ್ಬರು ಕುರಾನ್ ಇಟ್ಟರೆ, ಮತ್ತೊಬ್ಬರು ಬೈಬಲ್ ಇಟ್ಟರು. ಸ್ವಾಮಿ ವಿವೇಕಾನಂದರ ಭಗವದ್ಗೀತೆ ಗ್ರಂಥ ಎಲ್ಲ ಗ್ರಂಥಗಳ ಕೆಳಗೆ ಕೊನೆಯ ಸ್ಥಾನದಲ್ಲಿತ್ತು. ಸ್ವಾಮಿ ವಿವೇಕಾನಂದರ ಸರದಿ ಬಂದಾಗ ಅಲ್ಲಿನ ಧಾರ್ಮಿಕ ಗುರುಗಳು ಸಂಪೂರ್ಣ ಕೆಳಗೆ ಇದ್ದ ಭಗವದ್ಗೀತೆಯನ್ನು ತೆಗೆದು ಮೇಲಕ್ಕೆ ಇಡಲು ಹೇಳಿದರು. ಅದಕ್ಕೆ ಸ್ವಾಮಿ ವಿವೇಕಾನಂದರು ಒಪ್ಪಲಿಲ್ಲ. ಒಂದು ವೇಳೆ ನಾನು ಭಗವದ್ಗೀತೆಯನ್ನು ತೆಗೆದರೆ ಮೇಲಿರುವ ಧಾರ್ಮಿಕ ಗ್ರಂಥಗಳು ಕೆಳಗೆ ಬೀಳುತ್ತವೆ. ಅಂತಹ ಕೆಲಸ ಆಗಬಾರದು. ಸರ್ವ ಧರ್ಮಗಳನ್ನು ಗೌರವಿಸುವ, ಆಧರಿಸುವ ಸಂದೇಶವನ್ನು ಭಗವದ್ಗೀತೆ ಸಾರುತ್ತದೆ. ಮನುಕುಲದ ಉದ್ಧಾರ ಭಗವದ್ಗೀತೆಯಿಂದ ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು ಎಂದು ಅವರು ಹೇಳಿದರು.
ತಪ್ಪು ಮಾಡುವುದು ಸಹಜ. ಕೆಲವರು ದೊಡ್ಡ ದೊಡ್ಡ ತಪ್ಪು ಮಾಡಿರುತ್ತಾರೆ. ಅದಕ್ಕೆ ಪ್ರಾಯಶ್ಚಿತಪಟ್ಟುಕೊಳ್ಳಬೇಕು. ಎಲ್ಲರೂ ತಪ್ಪು ಮಾಡುವರು. ಆದಾಗ್ಯೂ, ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ನೀವು ಇಲ್ಲಿಂದ ಒಳ್ಳೆಯವರಾಗಿ ಹೊರಹೋಗಬೇಕು. ಅದಕ್ಕಾಗಿ ನಿಮ್ಮಲ್ಲಿ ಮಾನಸಿಕ ಹಾಗೂ ಬೌದ್ಧಿಕ ಶಕ್ತಿ ಬೆಳವಣಿಗೆ ಆಗಬೇಕು. ಆ ದಿಸೆಯಲ್ಲಿ ಯೋಗ, ಧ್ಯಾನ ಅಗತ್ಯ. ಅಂತಹ ಯೋಗವನ್ನು ನಾನೇ ನಿಮಗೆ ಹೇಳಿಕೊಡುತ್ತೇನೆ. ನೀವು ಇಲ್ಲಿಂದ ಒಳ್ಳೆಯ ನಾಗರಿಕರಾಗಿ ಹೊರಹೋಗುವ ಸಂಕಲ್ಪವನ್ನು ನಾನು ತೊಟ್ಟಿದ್ದೇನೆ ಎಂದು ಅವರು ಹೇಳಿದರು.
ಯೋಗದಿಂದ ನಿರೋಗಿಯಾಗುವುದರ ಜೊತೆಗೆ ಎಲ್ಲ ರೀತಿಯಿಂದಲೂ ಕ್ರಿಯಾಶೀಲರಾಗಿರುವರು. ಬೆಳಗಿನ ಜಾವ ನಾಲ್ಕು ಗಂಟೆಗೆ ಏಳುವುದು ಬ್ರಾಹ್ಮಿ ಮಹೋರ್ತ. ಆ ಸಮಯದಲ್ಲಿ ಏಳಲಾಗದಿದ್ದರೂ ಬೆಳಗಿನ ಜಾವ ಐದು ಗಂಟೆಗೆ ಏಳಿ. ತಮ್ಮ ತಮ್ಮ ದೇವರನ್ನು ನೆನೆದು ಕಾರ್ಯ ಪ್ರಾರಂಭಿಸಿ. ಒಂದೊಂದು ರೋಗಗಳ ನಿವಾರಣೆಗೆ ಒಂದೊಂದು ಯೋಗ ಇದೆ. ಪ್ರಾಣಾಯಾಮದಿಂದ ದೇಹದ ಸರ್ವ ಅಂಗಗಳ ಶುದ್ಧಿಯಾಗಲಿದೆ ಎಂದು ಅವರು ಹೇಳಿದರು.
ಉದ್ಯಮಿ ಶಿವಶರಣಪ್ಪ ಸೀರಿ ಅವರು ಮಾತನಾಡಿ, ಆಧ್ಯಾತ್ಮಿಕ ಶಕ್ತಿಯಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಎಂತಹ ಸಮಸ್ಯೆಗಳಿದ್ದರೂ ಎದುರಿಸಬಹುದು. ನೀವು ಆಧ್ಯಾತ್ಮದ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಿ. ನಿಮ್ಮ, ನಿಮ್ಮ ದೇವರನ್ನು ನೆನೆಯಿರಿ. ಅದರಲ್ಲಿಯೂ ರುದ್ರಾಕ್ಷಿ ಸರದ ಮೂಲಕ ಜಪ ಮಾಡಿದರೆ ಜೀವನದಲ್ಲಿ ಶಾಂತಿ, ಸಹನೆ, ನೆಮ್ಮದಿ ಸಿಗಲಿದೆ. ಯಾರು ಜಪ ಮಾಡಲು ರುದ್ರಾಕ್ಷಿ ಬಯಸುವಿರೋ ಅವರಿಗೆ ನಾನು ಕೊಡುವ ವ್ಯವಸ್ಥೆ ಮಾಡುತ್ತೇನೆ. ನೀವು ಆಧ್ಯಾತ್ಮದಿಂದ ಉತ್ತಮ ನಾಗರಿಕರಾಗಿ ಹೊರಬನ್ನಿ ಎಂದು ಹಾರೈಸಿದರು.
ನಾನೇ ಮೂರ್ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ಅದಕ್ಕೆ ಭಗವಂತನ ಜಪವೇ ಕಾರಣ. ನಿಮಗೆ ಏನಾದರೂ ಚಿಂತೆ ಕಾಡಿ, ನಿದ್ರಾಹೀನರಾದರೆ ರುದ್ರಾಕ್ಷಿ ಸರದ ಮೂಲಕ ಓಂ ನಾಮ ಜಪಿಸಿದರೆ ನಿಮ್ಮ ಕಷ್ಟ ಪರಿಹಾರವಾಗಲಿದೆ ಎಂದು ಅವರು ಹೇಳಿದರು.
ಪತ್ರಕರ್ತ ಬಸವರಾಜ್ ಚಿನಿವಾರ್ ಅವರು ಮಾತನಾಡಿ, ಎಲ್ಲರೂ ತಪ್ಪುಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ಮಾಡುತ್ತಾರೆ. ಯಾರು ಇತಿಮಿತಿ ಮೀರಿ ಕಾನೂನು ಕೈಗೆ ತೆಗೆದುಕೊಂಡವರು ಕಾನೂನಿನ ಅಡಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅದೇ ರೀತಿ ನೀವು ಸಹ ಕಾನೂನಿನ ಶಿಕ್ಷೆಗೆ ಒಳಗಾಗಿದ್ದೀರಿ. ಅದರಿಂದ ಬೇಸರ ಪಡದೇ ಮನ: ಪರಿವರ್ತನೆ ಮಾಡಿಕೊಳ್ಳಿ. ಮನೆಯಲ್ಲಿ ಯಾವ ರೀತಿ ಇರುತ್ತೀರೋ ಅದೇ ರೀತಿ ಇಲ್ಲಿಯೂ ಇರಬೇಕು. ಇದು ಜೈಲಲ್ಲ. ನಿಮಗೆ ಪೋಲಿಸ್ ಅಧಿಕಾರಿ ಅಲ್ಲ. ಬದಲಾಗಿ ಇದು ಪಾಠ ಶಾಲೆ, ಅವರು ಶಿಕ್ಷಕರು ಎಂದುಕೊಂಡು ಉತ್ತಮ ನಡಾವಳಿಗಳೊಂದಿಗೆ ಆಗಿರುವ ಶಿಕ್ಷೆಯನ್ನು ಸಮರ್ಥವಾಗಿ ಎದುರಿಸಿ ಬನ್ನಿ. ನಿಮಗೆ ಏನಾದರೂ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಖಂಡಿತ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಅವರ ಸಂದೇಶಗಳು ಎಲ್ಲರಿಗೂ ಸ್ಫೂರ್ತಿ. ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಜೈಲಿನ ಖೈದಿಗಳಿಗೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಅಗತ್ಯ. ಆ ದಿಸೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಜೈಲಿನಲ್ಲಿಯೇ ನಿರಂತರ ಯೋಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8ರಿಂದ 10 ಗಂಟೆಯೊಳಗೆ ನಿಗದಿತ ಅವಧಿಯಲ್ಲಿ ಯೋಗ ಚಟುವಟಿಕೆಗಳು ನಡೆಯಲಿದ್ದು, ಅದರ ಲಾಭವನ್ನು ಪಡೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಉಪ ಅಧೀಕ್ಷಕ ಗೋಪಾಲಕೃಷ್ಣ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ್ ಮೂಲಗೆ ಅವರು ಕಾರ್ಯಕ್ರಮ ನಿರೂಪಿಸಿದರು. ಜೈಲಿನ ಖೈದಿಗಳಿಬ್ಬರು ಜ್ಯೋತಿ ಬೆಳಗಿಸಿದ್ದು ಹಾಗೂ ಕಾರ್ಯಕ್ರಮದ ನಂತರ ಕೇಕ್ ಮೂಲಕ ಜಯಂತಿಯ ಸಂಭ್ರಮವನ್ನು ಖೈದಿಗಳು ಹಂಚಿಕೊಂಡರು.