ಅಮೇರಿಕಾದ ಪ್ರವಾಸಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಇಬ್ಬರು ಸೆರೆ

ಕೊಲ್ಲಂ (ಕೇರಳ),ಆ.2-ರಾಜ್ಯ ಪ್ರವಾಸ ಕೈಗೊಂಡಿದ್ದ ಅಮೆರಿಕದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚೆರಿಝಿಕ್ಕಲ್ ಪನ್ನಿಸ್ಸೆರಿಲ್‌ನ ನಿಖಿಲ್ ಹಾಗೂ ಚೆರಿಝಿಕ್ಕಲ್ ಅರಯಸೆರಿಲ್‌ನ ಜಯನ್ ಬಂಧಿತ ಆರೋಪಿಗಳಾಗಿದ್ದಾರೆ.
ಅಮೆರಿಕದ 44 ವರ್ಷದ ಮಹಿಳೆಯು ಜುಲೈ 22ರಂದು ಕೇರಳಕ್ಕೆ ಬಂದಿದ್ದರು. ಅಲ್ಲಿಂದ ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ಬಳಿಯ ಪ್ರಸಿದ್ಧ ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ದೇವಿಯ ಆಶ್ರಮ ಇರುವ ವಲ್ಲಿಕಾವು ಅಮೃತಪುರಿಗೆ ಭೇಟಿ ನೀಡಿದ್ದರು.
ಜುಲೈ 31ರಂದು ಈ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.ಅಮೃತಪುರಿ ಆಶ್ರಮದ ಬಳಿಯ ಕಡಲತೀರದಲ್ಲಿ ಕುಳಿತಿದ್ದಾಗ ಮಹಿಳೆ ಜೊತೆ ಸ್ನೇಹ ಬೆಳೆಸಿದ ಆರೋಪಿಗಳು ಮೊದಲು ಸಿಗರೇಟ್ ಬೇಕೇ ಎಂದು ಕೇಳಿದ್ದಾರೆ. ಅದನ್ನು ನಿರಾಕರಿಸಿದಾಗ ಮದ್ಯದ ಆಮಿಷವೊಡ್ಡಿ ಬೈಕ್​ನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶದ ಮನೆಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ.
ಅಲ್ಲದೇ, ಅಲ್ಲಿಯೇ ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದರಿಂದ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದರು ಎಂದು ವರದಿಯಾಗಿದೆ.ನಂತರ ಸಂತ್ರಸ್ತೆ ಆಶ್ರಮವನ್ನು ತಲುಪಿ ಕಿರುಕುಳದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಶ್ರಮದ ಅಧಿಕಾರಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ದೂರು ದಾಖಲಿಸಿಕೊಂಡು ಕರುನಾಗಪಲ್ಲಿ ಪೊಲೀಸರು ತನಿಖೆ ನಡೆಸಿ ಮಂಗಳವಾರ ಆರೋಪಿಗಳಾದ ನಿಖಿಲ್ ಮತ್ತು ಜಯನ್​ನನ್ನು ಬಂಧಿಸಲಾಗಿದೆ.
ಐಪಿಎಸ್​ ಸೆಕ್ಷನ್​ 376ಡಿ ಮತ್ತು 376(2)(ಎನ್​) ಅಡಿಯಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.