ಅಮೇರಿಕಾದಲ್ಲಿ ಸ್ವಾಮಿ ವಿವೇಕಾನಂದರ ಸಿಂಹವಾಣಿ

ಕೋಲಾರ,ಜ.೧೮- ವಿಶ್ವಾದ್ಯಂತ ವ್ಯಾಪಕವಾದ ರಾಜಕೀಯ ಪ್ರಕ್ಷುಬ್ಧತೆಯ ಪ್ರಸ್ತುತ ಹಿನ್ನೆಲೆಯಲ್ಲಿ ಅವರ ಸಾರ್ವತ್ರಿಕ ಸಹೋದರತ್ವ ಮತ್ತು ಸ್ವಯಂ ಜಾಗೃತಿಯ ಸಂದೇಶವು ಪ್ರಸ್ತುತವಾಗಿದೆ. ಯುವ ಸನ್ಯಾಸಿ ಮತ್ತು ಅವರ ಬೋಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಿದೆ, ಮತ್ತು ಅವರ ಮಾತುಗಳು ವಿಶೇಷವಾಗಿ ದೇಶದ ಯುವಕರಿಗೆ ಸ್ವಯಂ ಸುಧಾರಣೆಯ ಗುರಿಗಳಾಗಿವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು,
ಬಂಗಾರಪೇಟೆ ತಾಲೂಕಿನ ಹಂಚಾಳಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಕೀರ್ಣದಲ್ಲಿ ಏರ್ಪಡಿಸಿದ್ದ “ಸ್ವಾಮಿ ವಿವೇಕಾನಂದರ ೧೬೦ ನೇ ಜಯಂತಿ “ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಏಳಿ ಏದ್ದೇಳಿ ಎಚ್ಚರಗೊಳ್ಳಿ. ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ವಿವೇಕಾನಂದರ ಧ್ಯೇಯವಾಕ್ಯದೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಚಿಕಾಗೋ ವಿಶ್ವಧರ್ಮ ಸರ್ವಧರ್ಮ ಸಮ್ಮೇಳನದಲ್ಲಿ ಇಡೀ ವಿಶ್ವ ಪಥದಲ್ಲಿ ಹಾರಿಸಿದರೆಂದು ವಿವರಿಸಿದರು.
ವೀರ ಸನ್ಯಾಸಿ, ತತ್ವ ಜ್ಞಾನಿ, ಶಿಕ್ಷಣ ತಜ್ಞ, ಆರ್ಥಿಕ ದೂರದೃಷ್ಠಿತ್ವಗಳ ಸಮ್ಮಿಲನವನ್ನು ಮೈಗೂಡಿಸಿಕೊಂಡು ತನ್ನ ಸಂದೇಶಗಳ ಮುಖಾಂತರ ಯುವಜನರಲ್ಲಿ ಅಡಕವಾಗಿರುವ ಶಕ್ತಿ, ಕೌಶಲ್ಯಗಳನ್ನು ಹೊರಗೆಳೆದು ನವಭಾರತ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
ಉತ್ತಮ ಸಂಸ್ಕಾರ ಮತ್ತು ಶಿಕ್ಷಣದಿಂದ ಭಾರತದ ಹಿರಿಮೆ ಪ್ರಪಂಚದಲ್ಲಿ ಎತ್ತರಕ್ಕೆ ಬೆಳೆಯಬೇಕಾದರೆ ಅದರ ಸದುಪಯೋಗವನ್ನು ಯುವ ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಭಾರತದ ಸನಾತನಧರ್ಮ, ಸಂಸ್ಕೃತಿ, ಆಧುನಿಕ ಶಿಕ್ಷಣದಿಂದ ಇಂದಿನ ಮೂಡನಂಬಿಕೆಗಳನ್ನು ಹೊರದೂಡಬೇಕು ರಾಮಕೃಷ್ಣಾಶ್ರಮದ ಮುಖಾಂತರ ಸಾಮಾಜಿಕ ಸೇವಾ ಕಾರ್ಯಗಳನ್ನು ಇಂದಿಗೂ ಮುಂದುವರೆಯುತ್ತಿರುವುದು. ಸ್ವಾಮಿ ವಿವೇಕಾನಂದರ ಕೊಡುಗೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾದ್ಯಾಯ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಸಿ.ಎಸ್.ಸತೀಶ್, ಸಿದ್ದಾರ್ಥ ಪಾಲಿಟಿಕ್ನಿಕ್‌ನ ಪ್ರಾಂಶುಪಾಲ ದಯಾನಂದ್, ಡ್ಯಾನಿಯಲ್, ಝಾನ್ಸಿ ಪ್ರಸನ್ನ, ಸಿಬ್ಬಂದಿವರ್ಗ ಹಾಜರಿದ್ದರು, ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಶಿಕ್ಷಕ ಎಂ. ಪಾಪಣ್ಣ ನಿರೂಪಿಸಿ ವಂದಿಸಿದರು.