ಅಮೇರಿಕದಿಂದ ಉಕ್ರೇನ್‌ಗೆ ೨.೧ ಶತಕೋಟಿ ಡಾಲರ್ ಪ್ಯಾಕೇಜ್

ನ್ಯೂಯಾರ್ಕ್, ಜೂ.೧೦- ಒಂದೆಡೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ಮತ್ತಷ್ಟು ದಿನ ನಡೆಯುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಅಮೆರಿಕಾ ಇದೀಗ ಮತ್ತೊಂದು ಮಿಲಿಟರಿ ನೆರವಿನ ಪ್ಯಾಕೇಜ್ ಘೋಷಿಸಿದೆ. ರಷ್ಯಾ ವಿರುದ್ಧ ಸೂಕ್ತ ರೀತಿಯಲ್ಲಿ ಪ್ರತಿರೋಧ ತೋರುತ್ತಿರುವ ಉಕ್ರೇನ್ ಇದೀಗ ಅಮೆರಿಕಾ ಬರೊಬ್ಬರಿ ೨.೧ ಶತಕೋಟಿ ಡಾಲರ್ ಮೊತ್ತ ಮಿಲಿಟರಿ ನೆರವಿನ ಪ್ಯಾಕೇಜ್ ಘೋಷಿಸಿದೆ.
ಸದ್ಯ ಅಮೆರಿಕಾ ಘೋಷಿಸಿದ ಮಿಲಿಟರಿ ಪ್ಯಾಕೇಜ್‌ನಲ್ಲಿ ಅತ್ಯಾಧುನಿಕ ಪ್ಯಾಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಕ್ಷಿಪಣಿಗಳು, ಫಿರಂಗಿ ಸುತ್ತುಗಳು, ಡ್ರೋನ್‌ಗಳು ಮತ್ತು ಲೇಸರ್-ನಿರ್ದೇಶಿತ ರಾಕೆಟ್ ಸಿಸ್ಟಮ್ ಯುದ್ಧ ಸಾಮಗ್ರಿಗಳನ್ನು ಒಳಗೊಂಡಿದೆ. ಸಹಜವಾಗಿಯೇ ಇದು ಉಕ್ರೇನ್‌ಗೆ ಯುದ್ದದಲ್ಲಿ ಭಾರೀ ಮುನ್ನಡೆ ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೆಂಟಗಾನ್ (ಅಮೆರಿಕಾದ ಮಿಲಿಟರಿ ವಿಭಾಗ), ಹೊಸ ಶಸ್ತ್ರಾಸ್ತ್ರಗಳು ಉಕ್ರೇನ್‌ನ ನಿರ್ಣಾಯಕ ಅವಧಿಯ ಸಾಮರ್ಥ್ಯಗಳಿಗೆ ನಿರಂತರ ಬದ್ಧತೆ ಮತ್ತು ತನ್ನ ಪ್ರದೇಶವನ್ನು ರಕ್ಷಿಸಲು ಮತ್ತು ದೀರ್ಘಾವಧಿಯಲ್ಲಿ ರಷ್ಯಾದ ಆಕ್ರಮಣವನ್ನು ತಡೆಯಲು ಉಕ್ರೇನ್‌ನ ಸಶಸ್ತ್ರ ಪಡೆಗಳ ನಿರಂತರ ಸಾಮರ್ಥ್ಯವನ್ನು ನೀಡಲಿದೆ ಎಂದು ತಿಳಿಸಿದೆ. ಇನ್ನು ಹೊಸದಾಗಿರುವ ೨.೧ ಶತಕೋಟಿ ಡಾಲರ್ ಯೋಜನೆಯ ಮೂಲಕ ಅಮೆರಿಕಾವು ಉಕ್ರೇನ್‌ಗೆ ಇಲ್ಲಿಯತನಕ ಬರೊಬ್ಬರಿ ಒಟ್ಟು ೪೦.೪ ಶತಕೋಟಿ ಡಾಲರ್ (ಸುಮಾರು ೩,೨೦,೦೦೦ ಕೋಟಿ ರೂ.) ಮೊತ್ತ ನೀಡಿದಂತಾಗಿದೆ. ಸದ್ಯ ಆಗ್ನೇಯ ಮತ್ತು ದಕ್ಷಿಣ ಉಕ್ರೇನ್‌ನ ದೊಡ್ಡ ವಿಭಾಗಗಳಿಂದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಲು ಉಕ್ರೇನ್ ಹೋರಾಡುತ್ತಿದ್ದು, ಇದೇ ಅವಧಿಯಲ್ಲಿ ಮಿಲಿಟರಿ ನೆರವು ಘೋಷಣೆಯಾಗಿರುವುದು ಸಹಜವಾಗಿಯೇ ಅದಕ್ಕೆ ದೊಡ್ಡ ಮುನ್ನಡೆ ಒದಗಿಸಿದಂತಾಗಿದೆ. ಯುದ್ದ ಆರಂಭವಾದಂದಿನಿಂದ ಬಹುತೇಕ ಇಲ್ಲಿಯತನಕ ರಷ್ಯಾದ ಆಕ್ರಮಣಕ್ಕೆ ತಡೆಯೊಡ್ಡುವ ಕಾರ್ಯ ನಡೆಸುತ್ತಿದ್ದ ಉಕ್ರೇನ್ ಇದೀಗ ಮರುದಾಳಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಯುದ್ದ ಮತ್ತಷ್ಟು ಭೀಕರ ರೂಪ ತಾಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೂ ಅಲ್ಲದೆ ಅಮೆರಿಕಾದ ನೆರವು ಕೂಡ ಸೂಕ್ತ ಸಮಯಕ್ಕೆ ಲಭಿಸುತ್ತಿರುವುದು ಇದಕ್ಕೆ ನಿದರ್ಶನ.