ಅಮೆರಿಕ ನೌಕಾಪಡೆ ಸೂಕ್ಷ್ಮ ಮಾಹಿತಿ ಚೀನಾಗೆ ರವಾನೆ

ಕ್ಯಾಲಿಫೋರ್ನಿಯಾ, ಆ.೪- ಅಮೆರಿಕಾದ ನೌಕಾಪಡೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಚೀನಾಗೆ ರವಾನಿಸಿದ ಆರೋಪದ ಮೇರೆಗೆ ಯುಎಸ್ ನೌಕಾಪಡೆಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಜಿಂಚಾವೊ ವ್ಹೀ (೨೨) ಎಂಬಾತನ ವಿರುದ್ಧ ಅಮೆರಿಕಾ ನೌಕಾದಳದ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಚೀನಾಗೆ ಕಳುಹಿಸಲು ಪಿತೂರಿ ಮಾಡಿದ ಆರೋಪ ಹೊರಿಸಲಾಗಿದೆ. ಅತ್ತ ವೆನ್ಹೆಂಗ್ ಝಾವೊ (೨೬) ಎಂಬಾತನನ್ನು ಸೂಕ್ಷ್ಮ ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಇಬ್ಬರೂ ಅಧಿಕಾರಿಗಳನ್ನು ಬುಧವಾರ ಬಂಧಿಸಲಾಗಿದ್ದು, ಈ ಪೈಕಿ ವ್ಹೀನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ. ಇನ್ನು ಗುರುವಾರ ಸ್ಯಾನ್ ಡಿಯಾಗೋದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಾಸಿಕ್ಯೂಟರ್‌ಗಳು ಇಬ್ಬರ ಮೇಲಿನ ಆರೋಪಗಳನ್ನು ಪ್ರಕಟಿಸಿದರು. ವ್ಹೀ ಎಂಬಾತ ಉಭಯಚರ ದಾಳಿ ನಡೆಸಬಲ್ಲ ಸಾಮರ್ಥ್ಯದ ಹಡಗು ಯುಎಸ್‌ಎಸ್ ಎಸೆಕ್ಸ್‌ನಲ್ಲಿ ಮೆಕ್ಯಾನಿಕ್‌ನ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದು, ಇದರ ಎಲ್ಲಾ ಸೂಕ್ಷ್ಮ ಮಾಹಿತಿಗಳ ಬಗ್ಗೆ ಅರಿವು ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಕಳೆದ ೨೦೨೨ರ ಫೆಬ್ರವರಿಯಲ್ಲಿ ಅಮೆರಿಕಾ ಪ್ರಜೆಯಾಗುವ ಮುನ್ನ ಈತ ಚೀನಾದ ಏಜೆಂಟ್‌ನನ್ನು ಸಂಪರ್ಕಿಸಿದ್ದ ಎಂದು ಆರೋಪಿಸಲಾಗಿದೆ. ಛಾಯಾಚಿತ್ರಗಳು, ವೀಡಿಯೊಗಳು, ತಾಂತ್ರಿಕ ಕೈಪಿಡಿಗಳು ಮತ್ತು ಹಡಗಿನ ನೀಲನಕ್ಷೆಗಳಿಗಾಗಿ ಏಜೆಂಟ್ ಸಾವಿರಾರು ಡಾಲರ್ ಪಾವತಿ ಮಾಡಿದ್ದಾನೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ. ಸಮುದ್ರದಲ್ಲಿ ನಡೆಯುವ ಯುದ್ದ ಸಂಬಂಧಿ ತರಬೇತಿಯಲ್ಲಿ ಪಾಲ್ಗೊಳ್ಳುವ ನೌಕಾಪಡೆಗಳ ವಿವರಗಳನ್ನು ಕೂಡ ವ್ಹೀ ರವಾನಿಸಿದ್ದಾನೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.