ಅಮೆರಿಕ- ಉ.ಕೊರಿಯಾ ವೈಮನಸ್ಸು ತೀವ್ರ

ನ್ಯೂಯಾರ್ಕ್, ಜು.೧೦- ಇಂಡೋ-ಪೆಸಿಫಿಕ್‌ನಲ್ಲಿ ಒಂದೆಡೆ ಅಮೆರಿಕಾ ಹಾಗೂ ಚೀನಾದ ಶೀತಲ ಸಮರದ ನಡುವೆ ಅಮೆರಿಕಾ-ಉತ್ತರ ಕೊರಿಯಾ ನಡುವಿನ ವೈಮನಸ್ಸು ಕೂಡ ತಾರಕ್ಕೇರಿದೆ. ಅಮೆರಿಕಾದ ಕಣ್ಗಾವಲು ವಿಮಾನಗಳು ತನ್ನ ವಾಯುಪ್ರದೇಶಗಳನ್ನು ಉಲ್ಲಂಘಿಸುತ್ತಿದ್ದು, ಒಂದು ವೇಳೆ ಪುನರಾವರ್ತನೆಯಾದರೆ ಹೊಡೆದುರುಳಿಸಲಾಗುವುದು ಎಂದು ಉತ್ತರ ಕೊರಿಯಾ ಸೋಮವಾರ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಉತ್ತರ ಕೊರಿಯಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಕೆಸಿಎನ್‌ಎಗೆ ಮಾಹಿತಿ ನೀಡುತ್ತಾ, ಅಮೆರಿಕಾದ ಪ್ರಚೋದನಕಾರಿ ಮಿಲಿಟರಿ ಕ್ರಮಗಳು ಕೊರಿಯನ್ ಪರ್ಯಾಯ ದ್ವೀಪವನ್ನು ಪರಮಾಣು ಸಂಘರ್ಷದ ಹತ್ತಿರಕ್ಕೆ ತರುತ್ತಿವೆ. ಉತ್ತರ ಕೊರಿಯಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಯುಎಸ್ ವಾಯುಪಡೆಯ ಕಾರ್ಯತಂತ್ರ ಹಾಗೂ ಕಣ್ಗಾವಲು ವಿಮಾನಗಳನ್ನು ಹೊಡೆದುರುಳಿಸುವಂಥ ಘಟನೆಗಳು ಸಂಭವಿಸುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ನಮ್ಮ ಪರ್ಯಾಯ ದ್ವೀಪಕ್ಕೆ ಪರಮಾಣು ಕಾರ್ಯತಂತ್ರದ ನೌಕೆಗಳನ್ನು ತರುವ ಅಮೆರಿಕಾದ ಕ್ರಮವು ಉತ್ತರ ಕೊರಿಯಾ ಹಾಗೂ ಪ್ರಾದೇಶಿಕ ರಾಷ್ಟ್ರಗಳ ವಿರುದ್ಧದ ಅತ್ಯಂತ ಮುಚ್ಚುಮರೆಯಿಲ್ಲದ ಪರಮಾಣು ಬ್ಲ್ಯಾಕ್‌ಮೇಲ್ ಆಗಿದ್ದು, ಇದರಿಂದ ಇಲ್ಲನ ಶಾಂತ ಪರಿಸ್ಥಿತಿಗೆ ಗಂಭೀರ ಬೆದರಿಕೆ ಒಡ್ಡುತ್ತಿದೆ. ಉತ್ತರ ಕೊರಿಯಾದ ದ್ವೀಪ ಸಮೂಹದಲ್ಲಿ ಯಾರೂ ಬಯಸದ ವಿಪರೀತ ಪರಿಸ್ಥಿತಿಯನ್ನು ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಅಮೆರಿಕಾದ ಭವಿಷ್ಯದ ನೀತಿಯ ಮೇಲೆ ಅವಲಂಬಿತವಾಗಿದೆ. ಅಲ್ಲದೆ ಯಾವುದೇ ಹಠಾತ್ ಪರಿಸ್ಥಿತಿ ಉಲ್ಬಣಿಸಿದ್ದಲ್ಲಿ ಅದಕ್ಕೆ ಅಮೆರಿಕಾ ಸಂಪೂರ್ಣ ಹೊಣೆಗಾರಿಕೆ ಹೊಂದಿದೆ ಎಂದು ತಿಳಿಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ಈ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಹೆಚ್ಚಿಸಿತ್ತು. ವಿಶೇಷವಾಗಿ ಅಮೆರಿಕಾದ ವಿಮಾನ ವಾಹಕ ನೌಕೆ ಹಾಗೂ ಬಾಂಬರ್‌ಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಅಲ್ಲದೆ ಯುಎಸ್‌ನ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯು ಕಳೆದ ತಿಂಗಳು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಬಂದರಿನಲ್ಲಿ ಲಂಗರು ಹಾಕಿತ್ತು. ಈ ಎಲ್ಲಾ ಬೆಳವಣಿಗೆಗಳು ಸಹಜವಾಗಿಯೇ ಉತ್ತರ ಕೊರಿಯಾಗೆ ಆಕ್ರೋಶ ಮೂಡುವಂತೆ ಮಾಡಿದೆ.