ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪೆನ್ಸ್ ಸ್ಪರ್ಧೆ

ನ್ಯೂಯಾರ್ಕ್, ಜೂ.೧- ಜಾಗತಿಕ ವಲಯವನ್ನೇ ತನ್ನತ್ತ ಸೆಳೆಯುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈಗಾಗಲೇ ತಯಾರಿ ಬಿರುಸಿನಿಂದ ಕೂಡಿದೆ. ಈ ನಡುವೆ ಅಮೆರಿಕಾ ಮಾಜಿ ಉಪಾಧ್ಯಕ್ಷ, ರಿಪಬ್ಲಿಕನ್ ಪಕ್ಷದ ಮೈಕ್ ಪೆನ್ಸ್ ಹಾಗೂ ನ್ಯೂಜೆರ್ಸಿಯ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ತಿ ತಮ್ಮ ತಮ್ಮ ನಾಮನಿರ್ದೇಶನ ಸ್ಪರ್ಧೆಯನ್ನು ಬಿರುಸುಗೊಳಿಸಲು ನಿರ್ಧರಿಸಿದ್ದಾರೆ. ಸಹಜವಾಗಿಯೇ ಟ್ರಂಪ್ ಹಾಗೂ ಪೆನ್ಸ್ ನಡುವೆ ನಾಮನಿರ್ದೇರ್ಶನ ಸ್ಪರ್ಧೆ ಜಿದ್ದಾಜಿದ್ದಿನಿಂದ ಕೂಡುವ ಎಲ್ಲಾ ಸಾಧ್ಯತೆ ಇದ್ದು, ಚುನಾವಣಾ ಕಣಕ್ಕೆ ಮತ್ತಷ್ಟು ರಂಗು ತಂದಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೈಕ್ ಪೆನ್ಸ್ ಉಪಾಧ್ಯಕ್ಷ ಕಾರ್ಯ ನಿರ್ವಹಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಟ್ರಂಪ್ ಅಭಿಮಾನಿಗಳು ಕ್ಯಾಪಿಟೊಲ್ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ಹಾಗೂ ಪೆನ್ಸ್ ನಡುವಿನ ಸಂಬಂಧ ಹಳಸಿತ್ತು. ದಾಳಿಯ ವೇಳೆ ಟ್ರಂಪ್ ಬೆಂಬಲಿಗರು ಪೆನ್ಸ್ ಅವರನ್ನು ಗಲ್ಲಿಗೇರಿಸಿ ಎಂದು ಘೋಷಣೆ ಕೂಡ ಕೂಗಿದ್ದು, ಕಂಡು ಬಂದಿತ್ತು. ಅಲ್ಲದೆ ಒಂದು ಹಂತದಲ್ಲಿ ದಾಳಿಯ ವೇಳೆ ಆಕ್ರೋಶಿತರ ದಾಳಿಕೋರರಿಂದ ಪೆನ್ಸ್ ಕೇವಲ ೪೦ ಮೀಟರ್ ಮಾತ್ರ ದೂರವಿದ್ದಿದ್ದರು. ಆ ಬಳಿಕ ಟ್ರಂಪ್ ಹಾಗೂ ಪೆನ್ಸ್ ನಡುವಿನ ಉತ್ತಮ ಆತ್ಮೀಯ ಸಂಬಂಧ ಹಳಸಿ, ವೈರತ್ವಕ್ಕೆ ತಿರುಗಿತ್ತು. ಸದ್ಯ ಇಬ್ಬರೂ ಕೂಡ ರಿಪಬ್ಲಿಕನ್ ಪಕ್ಷದವರಾಗಿದ್ದರೂ ಮುಂದಿನ ೨೦೨೪ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನ ಸಲ್ಲಿಸಲು ಅಣಿಯಾಗಿದ್ದಾರೆ. ಮೂಲಗಳ ಪ್ರಕಾರ ಜೂನ್ ೭ರಂದು ಪೆನ್ಸ್ ಅವರು ಲೋವಾದಲ್ಲಿ ಬೃಹತ್ ರ್‍ಯಾಲಿ ನಡೆಸುವ ಮೂಲಕ ತಮ್ಮ ಚುನಾವಣಾ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರೇಡಿಯೋದಲ್ಲಿ ನಿರೂಪಕರಾಗಿ ವೃತ್ತಿ ಆರಂಭಿಸಿದ್ದ ಪೆನ್ಸ್ ಬಳಿಕ ೨೦೦೦ರಲ್ಲಿ ಮೊದಲ ಬಾರಿಗೆ ಸದನಕ್ಕೆ ಆಯ್ಕೆಯಾಗಿ, ೨೦೧೩ರ ವರೆಗೆ ಮುಂದುವರೆದಿದ್ದರು. ಬಳಿಕ ೨೦೧೩ರಿಂದ ೨೦೧೭ರ ತನಕ ಇಂಡಿಯಾನ ರಾಜ್ಯದ ಗವರ್ನರ್ ಆಗಿ ಅಧಿಕಾರ ನಡೆಸಿದ್ದರು. ಈ ಅವಧಿಯಲ್ಲಿ ಪೆನ್ಸ್ ಅವರು ಇಂಡಿಯಾನ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ತೆರಿಗೆ ಕಡಿತವನ್ನು ಅಂಗೀಕರಿಸಿದರು ಮತ್ತು ಗರ್ಭಪಾತವನ್ನು ನಿರ್ಬಂಧಿಸಲು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಮಸೂದೆ ಗಳಿಗೆ ಸಹಿ ಹಾಕಿ ಎಲ್ಲರ ಗಮನ ಸೆಳೆದಿದ್ದರು. ಆ ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಬಹುಮತ ಲಭಿಸಿದ ಹಿನ್ನೆಲೆಯಲ್ಲಿ ಅಮೆರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇನ್ನು ಅತ್ತ ರಿಪಬ್ಲಿಕನ್ ಪಕ್ಷದ ಕ್ರಿಸ್ತಿ ಕೂಡ ತಮ್ಮ ನಾಮನಿರ್ದೇರ್ಶನ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೂನ್ ೬ರಂದು ನ್ಯೂ ಹ್ಯಾಮ್‌ಶೆರ್‌ನ ನಡೆಯುವ ಟೌನ್‌ಹಾಲ್ ಸಮಾರಂಭದಲ್ಲಿ ಕ್ರಿಸ್ತಿ ಅವರು ತಮ್ಮ ತಮ್ಮ ಉಮೇದುವಾರಿಕೆ ಯನ್ನು ಘೋಷಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಸ್ಥಳದಲ್ಲಿ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆ ಕೂಡ ನಡೆಯಲಿರುವುದು ವಿಶೇಷ. ೨೦೧೬ರ ತಮ್ಮ ಅಧ್ಯಕ್ಷೀಯ ನಾಮನಿರ್ದೇಶನ ವಿಫಲವಾದ ನಂತರ, ಟ್ರಂಪ್ ಜೊತೆ ಕ್ರಿಸ್ತಿ ಮೈತ್ರಿ ಸಾಧಿಸಿದ್ದರು. ಆದರೆ ೨೦೨೧ರಲ್ಲಿ ನಡೆದ ಕ್ಯಾಪಿಟೊಲ್ ದಾಳಿಯ ಬಳಿಕ ಕ್ರಿಸ್ತಿ ಅವರು ಟ್ರಂಪ್ ಅವರ ಟೀಕಾಕಾರರಾಗಿ ಬದಲಾಗಿದ್ದರು. ಸದ್ಯ ಎಲ್ಲರ ಕುತೂಹಲ ರಿಪಬ್ಲಿಕನ್ ಪಕ್ಷದ ಉಮೇದುವಾರಿಕೆಗಳ ಮೇಲೆ ನೆಟ್ಟಿದೆ. ಅತ್ತ ಟ್ರಂಪ್ ಕೂಡ ತನ್ನ ಅಧ್ಯಕ್ಷೀಯ ಉಮೇದುವಾರಿಕೆ ಪ್ರಬಲಗೊಳಿಸಲಿದ್ದಾರೆ ಎನ್ನಲಾಗಿದೆ.