ಅಮೆರಿಕೆಯ ನೆಲದಲ್ಲಿ ಕನ್ನಡ ದೀಪಗಳು

ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮಗೆ ಕಲ್ಪತರು

ಕುವೆಂಪುರವರ ಈ ನುಡಿ ಅಮೆರಿಕೆಯಲ್ಲಿ ವಾಸವಾಗಿರುವ ಕನ್ನಡಿಗರಿಗೆ ಅಕ್ಷರಶಃ ಅನ್ವಯಿಸುತ್ತದೆ. ಕಡಲಾಚೆ ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಅವರಿದ್ದರೂ ಕನ್ನಡತನವನ್ನು ಬಿಟ್ಟಿಲ್ಲ. ಅಮೆರಿಕೆಯ ಅವಸರದ ಬದುಕಲ್ಲೂ, ಅವರ ಮನೆ ಮನಗಳಲ್ಲಿ ಕನ್ನಡತನದ ಅಭಿಮಾನ ತುಂಬಿ ತುಳುಕುತ್ತಿದೆ. ಬದುಕು ಕಟ್ಟಿಕೊಳ್ಳಲು ಅವರು ಬಹುದೂರ ನೆಲೆಸಿದ್ದರೂ ನಮ್ಮ ನಾಡು, ನುಡಿ, ಸಂಸ್ಕೃತಿ, ಅಚಾರ, ವಿಚಾರಗಳನ್ನು ಮರೆತಿಲ್ಲ. ಅದಕ್ಕೆ ಸಾಕ್ಷಿ, ಅವರು ಪ್ರತೀ ವರ್ಷ ಅಚರಿಸುವ ಯುಗಾದಿ, ದೀಪಾವಳಿ ಹಾಗೂ ರಾಜ್ಯೋತ್ಸವ ಹಬ್ಬಗಳು.
ಕಳೆದ ಕೆಲವು ವರ್ಷಗಳ ಹಿಂದೆ ಶಿಕ್ಷಣ ಫೌಂಡೇಶನ್ ಗುರುಪುರಸ್ಕಾರ ಅಂಗವಾಗಿ ದೀಪಾವಳಿ ರಾಜ್ಯೋತ್ಸವದ ಕ್ಷಣಗಳನ್ನು ಅಮೆರಿಕೆಯ ಆಸ್ಟಿನ್‌ದಲ್ಲಿ ಕಳೆಯುವ ಸೌಭಾಗ್ಯ ಒದಗಿ ಬಂದಿತ್ತು. ಅಂದು ದೀಪಾವಳಿ ಅಂದಾಕ್ಷಣ ನನ್ನ ನಾಡಿನ ನೆನಪಾಗಿ ಕಣ್ಣುಗಳು ಒದ್ದೆಯಾಗಿದ್ದವು. ಪ್ರತೀ ವರ್ಷ ನನ್ನ ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಳ್ಳುತ್ತಿದ್ದ ದೀಪಾವಳಿ ಹಬ್ಬದಲ್ಲಿ ನನ್ನ ಬಂಧು ಬಾಂಧವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಭಾವ ಕಾಡುತ್ತಿತ್ತು. ಆದರೆ ಅಮೆರಿಕೆಯ ಕನ್ನಡಿಗರ ದೀಪಾವಳಿ ಆಚರಣೆ ನಮ್ಮ ತವರನ್ನು ಮರೆಸಿತ್ತು. ಒಂದು ಕ್ಷಣ ನಾವು ಅಮೆರಿಕೆಯ ಆಸ್ಟಿನ್‌ದಲ್ಲಿದ್ದೇವೆಯೋ ಅಥವಾ ಕರ್ನಾಟಕದಲ್ಲಿದ್ದೇವೆಯೋ ಎನ್ನುವ ಸಂದೇಹ ಮೂಡುವಂತಾಗಿತ್ತು.


ಅಮೆರಿಕೆಯ ದೊಡ್ಡ ನಗರಗಳಾದ ಆಸ್ಟಿನ್, ಡಲ್ಲಾಸ್, ಸ್ಯಾನ್ ಅಂಟಾನಿಯೋ, ಹ್ಯೂಸ್ಟನ್, ಅಟ್ಲಾಂಟಾ, ವಾಶಿಂಗ್ಟನ್ ಡಿಸಿ ಹೀಗೆ ಎಲ್ಲೆಡೆಯೂ ವಿವಿಧ ಉದ್ಯೋಗಗಳ ಮೇಲೆ ಬಹುಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಎಲ್ಲ ಪ್ರಮುಖ ನಗರಗಳಲ್ಲಿಯೂ ಕನ್ನಡ ಸಂಘಗಳಿವೆ. ಅಮೆರಿಕೆಯಲ್ಲಿ ಬಹುದೊಡ್ಡ ಕನ್ನಡಿಗರ ಜಾತ್ರೆ ಅಕ್ಕ ಸಮ್ಮೇಳನದ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ಅಸ್ಟಿನ್ ಪುಟ್ಟ ನಗರದಲ್ಲಿಯೇ ೧೦೦ಕ್ಕೂ ಹೆಚ್ಚು ಕನ್ನಡ ಕುಟುಂಬಗಳಿವೆ. ಯುಗಾದಿ, ದೀಪಾವಳಿ, ರಾಜ್ಯೋತ್ಸವ ಹಬ್ಬಗಳನ್ನು ಕರ್ನಾಟಕದಲ್ಲಿ ಆಚರಿಸುವುದಕ್ಕಿಂತಲೂ ಹೆಚ್ಚು ವಿಜೃಂಭಣೆಯಿಂದ ಅವರು ಆಚರಿಸಿಕೊಳ್ಳುತ್ತಾರೆ.
ಕರ್ನಾಟಕದ ದಕ್ಷಿಣ, ಉತ್ತರ, ಕರಾವಳಿ, ಹೈದರಾಬಾದ ಕರ್ನಾಟಕ ಹೀಗೆ ವಿವಿಧ ಭಾಗಗಳಿಂದ ಅಲ್ಲಿಗೆ ಹೋಗಿ ನೆಲೆಸಿದ್ದರೂ ಅವರಲ್ಲಿ ಇಲ್ಲಿಯವರಂತೆ ಯಾವುದೇ ಕಚ್ಚಾಟಗಳಿಲ್ಲ. ಮೇಲು ಕೀಳು ಎಂಬ ಭಾವ ಅಲ್ಲಿನ ಕನ್ನಡಿಗರಿಗೆ ಕಿಂಚಿತ್ತೂ ಇಲ್ಲ. ಕನ್ನಡ ಭಾಷೆ ಬಲ್ಲವರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಆ ದಿನ ಅಪ್ಪಿಕೊಳ್ಳುತ್ತಾರೆ. ಶುಭಾಶಯ ವಿನಿಮಯ ಮಾಡುತ್ತಾರೆ. ಒಬ್ಬರಿಗೊಬ್ಬರು ಸಿಹಿ ತಿನ್ನಿಸುತ್ತಾರೆ. ಸಂತೋಷದಿಂದ ಕುಣಿಯುತ್ತಾರೆ.
ಆಸ್ಟಿನ್‌ದಲ್ಲಿ ಇದ್ದ ೨೧ ದಿನಗಳೂ ನಮಗೆ ಕನ್ನಡಿಗರ ಆದರ, ಆತಿಥ್ಯ ದೊರೆತಿತ್ತು. ಪ್ರತಿ ದಿನವೂ ದೀಪಾವಳಿ. ಸಾಫ್ಟವೇರ್ ಉದ್ಯೋಗಿ ಸುಮಾ ಮತ್ತು ಪ್ರಭಾಕರ ಐತಾಳ, ಕನ್ನಡ ಸಂಘದ ಅಧ್ಯಕ್ಷರಾದ ದೇವೇಂದ್ರ ಮತ್ತು ಸುಮಾ ರೆಡ್ಡಿ, ಟೆಕ್ಸಾಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರಭುದೇವ ಮತ್ತು ಸುಚೇತಾ ಕೋನಾನಾ, ಸಮಾಜಶಾಸ್ತ್ರ ಪ್ರಾಧ್ಯಾಪಕಿ ಶರ್ಮಿಳಾ ರುದ್ರಪ್ಪ, ಸರ್ಕಾರಿ ಸೇವೆಯ ನಿರ್ದೇಶಕ ಹರೀಶರಾವ್ ಮತ್ತು ಲತಾ, ವೈದ್ಯರಾದ ಸುಮಾ ಮತ್ತು ಮಂಜುನಾಥ ಜೋಯಿಸ್, ಸಾವಯವ ಕೃಷಿಕರಾದ ವೆಂಕಪ್ಪ ಗಣಿ, ಕಮ್ಯೂನಿಟಿ ಕಾಲೇಜ ಪ್ರಾಧ್ಯಾಪಕರಾದ ಸುಲತಾ ಮತ್ತು ನಾಗರಾಜ, ಮಾಂಟೇಸರಿ ಶಾಲಾ ಶಿಕ್ಷಕಿಯಾದ ವೀಣಾ ಸುಕುಮಾರ, ಸಾಫ್ಟವೇರ್ ಉದ್ಯೋಗಿಗಳಾದ ರಾಜ್ ಮತ್ತು ಆಶಾ ಅರಳಿ, ಸುಮಾ ಮತ್ತು ಪ್ರಕಾಶ ಉಡುಪ, ಅದರ್ಶ ಮತ್ತು ವೀಣಾ ಶ್ರಿವತ್ಸ, ದೀಪಕ ಮತ್ತು ದೀಪ್ತಿ, ಚಕ್ರಪಾಣಿ ಮತ್ತು ರೂಪಾ, ಸ್ಮಿತಾ ಮತ್ತು ಬಾಲಾಜಿ ರಾವ್, ಸಂಧ್ಯಾ ಮತ್ತು ವೆಂಕಟೇಶ, ಕವಿತಾ ಮತ್ತು ಹರೀಶ, ರಂಗನಾಥ ಮತ್ತು ಸುಮಾ ಭಂಡೆ, ಶಶಿಧರ ಮತ್ತು ಶ್ರೀಲಕ್ಷ್ಮಿ, ಶೀಲಾ ಮತ್ತು ಶ್ರೀಧರ, ಮುಂತಾದ ಕುಟುಂಬಗಳು ನಮಗೆ ವಿಶೇಷ ಆತಿಥ್ಯವನ್ನು ನೀಡಿದವು. ದೀಪಾವಳಿ ಅಂಗವಾಗಿ ಪ್ರತಿದಿನ ಒಬ್ಬೊಬ್ಬರ ಮನೆಯಲ್ಲಿ ಭೋಜನಕೂಟ. ಆ ನೆಪದಲ್ಲಿ ಆಸ್ಟಿನ್‌ನ ಎಲ್ಲ ಕನ್ನಡಿಗರ ಮನೆ ಮನೆ ಸಂಭ್ರಮ.
ದೀಪಾವಳಿ ಪಾಡ್ಯದ ದಿನ ವಿಶೇಷವಾದುದು. ಅಂದು ರಾಯಚೂರಿನ ಚಂದ್ರು ನೆಲೋಗಲ್ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ತುಂಬಾ ವಿಶಿಷ್ಟವಾದ ಅಚರಣೆ. ಉತ್ತರ ಕರ್ನಾಟಕ ರೀತಿಯ ಬಗೆ ಬಗೆಯ ಪಕ್ವಾನ್ನಗಳು. ಹೋಳಿಗೆ, ಕಡುಬು, ಭಜ್ಜಿ, ವಡೆ, ಸಂಡಿಗೆ, ಹಪ್ಪಳ, ಕಟ್ಟಿನಸಾರು. ಎಂತವರ ಬಾಯಲ್ಲೂ ನೀರೂರಬೇಕು. ಮೊದಲು ದೇವರಿಗೆ ದೀಪ ಬೆಳಗಲಾಯಿತು. ನಂತರ ಮನೆಯ ಸುತ್ತ ಮುತ್ತ ದೀಪಗಳ ಸಾಲನ್ನು ಹೊತ್ತಿಸಲಾಯಿತು. ಮಕ್ಕಳು, ದೊಡ್ಡವರು, ಮಹಿಳೆಯರು ಪಟಾಕಿ ಹೊಡೆದು ಸಂಭ್ರಮಿಸಿದರು. ಅಕ್ಕಪಕ್ಕದ ಅಮೆರಿಕೆ ಮೂಲದವರು ಚಂದ್ರುರವರ ಮನೆಗೆ ಅಗಮಿಸಿ ಅವರಿಗೆ ಶುಭಾಶಯ ಕೋರುತ್ತಿದ್ದರು. ಅವರ ಮಕ್ಕಳು ಕನ್ನಡಿಗ ಮಕ್ಕಳೊಂದಿಗೆ ಸಂಭ್ರಮಿಸಿದರು. ನಿಜಕ್ಕೂ ಆಸ್ಟಿನ್ ಕನ್ನಡಿಗರ ದೀಪಾವಳಿ ಸಂಭ್ರಮ ಎರಡು ಕಣ್ಣುಗಳಿಗೆ ನೋಡಲಸದಳವಾದದ್ದು.
ಅಮೆರಿಕದಲ್ಲಿ ಎಲ್ಲೆಲ್ಲಿ ಭಾರತೀಯರು ವಾಸವಾಗಿದ್ದಾರೋ, ಅಲ್ಲಲ್ಲಿ ಹಿಂದೂ ದೇವಾಲಯಗಳನ್ನು ಕಾಣಬಹುದು. ಆಸ್ಟಿನ್ ನಗರದಲ್ಲಿ ಬರಸಾನಾ ದೇವಸ್ಥಾನ, ಆಸ್ಟಿನ್ ಹಿಂದೂ ದೇವಾಲಯ ಸಂಕೀರ್ಣದಲ್ಲಿ ಹಲವು ದೇವರುಗಳು, ಹ್ಯೂಸ್ಟನ್ ನಗರದಲ್ಲಿ ಮೀನಾಕ್ಷಿ ದೇವಾಲಯ ಪ್ರಸಿದ್ಧವಾದುದು. ಒಂದೇ ದೇವಾಲಯದ ಆವರಣದಲ್ಲಿ ಹಲವು ದೇವರ ಮೂರ್ತಿಗಳನ್ನು ಕಾಣಬಹುದು. ಶಿವ-ಪಾರ್ವತಿ, ರಾಧಾ-ಕೃಷ್ಣ, ರಾಮ-ಸೀತೆ, ಹನುಮಾನ್, ಸಾಯಿಬಾಬಾ, ನವಗ್ರಹ ವಿಗ್ರಹಗಳು ಹೀಗೆ ಒಂದೇ ಎರಡೇ. ವಿದೇಶಿ ನೆಲದಲ್ಲೂ ನಮ್ಮ ಕನ್ನಡಿಗರದು ಎಂತಹ ಭಕ್ತಿ? ಕೆಲವು ಕಡೆ, ಹಿಂದೂ ಅರ್ಚಕರಿದ್ದರೆ, ಇನ್ನು ಕೆಲವು ಕಡೆ ಅಮೆರಿಕೆ ಮೂಲನಿವಾಸಿಗಳೇ ಅರ್ಚಕರು. ಅಮೆರಿಕನ್ನರಿಗೆ ಹಿಂದೂಗಳ ಸಂಸ್ಕೃತಿ, ಯೋಗ ಪ್ರಾಣಾಯಾಮ, ಅಧ್ಯಾತ್ಮ, ಆಯುರ್ವೇದ, ಪುರಾಣಗಳ ಬಗ್ಗೆ ಎಲ್ಲಿಲ್ಲದ ಅಸಕ್ತಿ! ಇಲ್ಲಿ ಸ್ಥಾಪಿಸಲಾದ ಮೂರ್ತಿಗಳನ್ನು ಭಾರತದಿಂದ ತರಿಸಲಾಗಿದೆಯಂತೆ. ಇಲ್ಲಿನ ಕನ್ನಡಿಗ ಮಕ್ಕಳಲ್ಲೂ ಭಕ್ತಿಯ ಪರಾಕಾಷ್ಠೆ ಮನೆಮಾಡಿದೆ. ಪೂಜೆ ಪುನಸ್ಕಾರ, ದೇವರ ನಾಮ, ಭಜನೆ, ಪಂಚಾಕ್ಷರಿ ಮಂತ್ರ, ಭಗವದ್ಗೀತೆ, ಉಪನಿಷತ್ ಶ್ಲೋಕಗಳನ್ನು ಇಲ್ಲಿನ ಮಕ್ಕಳು ಸರಾಗವಾಗಿ ಪಠಿಸುತ್ತಾರೆ. ಯೋಗ, ಪ್ರಾಣಾಯಾಮ, ಭರತನಾಟ್ಯ, ಕುಚುಪುಡಿ, ಯಕ್ಷಗಾನದಲ್ಲೂ ಎತ್ತಿದ ಕೈ.
ದೀಪಾವಳಿ, ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ಹಿರಿಯರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುತ್ತಾರೆ. ಕೆಲ ಮೋಜಿನ ಆಟಗಳು, ಸ್ಪರ್ಧೆಗಳ ಆಯೋಜನೆಯಾಗಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮವಂತೂ ಕಣ್ಣಿಗೆ ರಸದೌತಣ ನೀಡುತ್ತದೆ. ಕಳೆದ ವರ್ಷ ಸ್ಯಾಂಡಲ್‌ವುಡ್ ಥೀಮ್ ಮೇಲೆ ಚಿತ್ರರಂಗ, ಮಹಾನ್ ಕಲಾವಿದರು ಹಾಗೂ ಸುಮಧುರ ಗೀತೆಗಳಿಗೆ ಗೌರವ ಸೂಚಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಕಲಾವಿದ, ಕಲಾವಿದೆ ವೇಷದಲ್ಲಿ ಉಡುಗೆ ತೊಡುಗೆ ಧರಿಸಿ, ಮೇಕಪ್ ಮಾಡಿಕೊಂಡು ಕೆಲ ಹಾಡುಗಳಿಗೆ ಸ್ಟೆಪ್ ಹಾಕಿದರು. ಡೈಲಾಗ್ ಹೇಳಿದರು. ಹಾಸ್ಯ ಚಟಾಕಿ ಹಾರಿಸಿದರು. ಈ ಸಂದರ್ಭದಲ್ಲಿ ‘ಸಂಪಿಗೆ-ಸಮಸ್ತ ಕನ್ನಡಿಗರ ಸಂಪ್ರೀತಿಗೆ’ ಎಂಬ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು. ಅದರಲ್ಲಿ ಮಕ್ಕಳು ಹಾಗೂ ಡೊಡ್ಡವರ ಕನ್ನಡ ಕಥೆ, ಕವನ, ಚುಟುಕು, ಪ್ರವಾಸ ಕಥನಗಳಿವೆ.
ಒಟ್ಟಿನಲ್ಲಿ ದೂರದ ದೇಶದ ಕನ್ನಡಿಗರ ಬದುಕು ಹೆಚ್ಚು ಒಗ್ಗಟ್ಟು ಮತ್ತು ಸದ್ಭಾವದಿಂದ ಕೂಡಿದೆ. ಏಕೆಂದರೆ ತಮ್ಮ ಬಂಧು-ಬಳಗದವರ ಅಗಲಿಕೆಯ ನೋವು ಅವರಲ್ಲಿರುವುದರಿಂದ ಅವರು ಬೇಗ ಒಂದುಗೂಡುತ್ತಾರೆ. ಬೆರೆಯುತ್ತಾರೆ. ಅಲ್ಲಿನ ಕನ್ನಡಿಗರಲ್ಲೇ ತಮ್ಮ ಸ್ವಂತ ಬಂಧು-ಬಾಂಧವರನ್ನು ಕಾಣುತ್ತಾರೆ. ಆಗ ಅವರಲ್ಲಿ ಜಾತಿ ಬೇಧ ಭಾವಗಳಿರುವುದಿಲ್ಲ. ಮೇಲು ಕೀಳು, ಉಚ್ಛ ನೀಚ ಎಂಬ ಭಾವ ಮೂಡುವುದೇ ಇಲ್ಲ. ಒತ್ತಡದ ಬದುಕಲ್ಲೂ ಹಬ್ಬದ ಸಂದರ್ಭಗಳಲ್ಲಿ ಒಂದುಗೂಡುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಅಮೆರಿಕೆಯ ನೆಲದಲ್ಲಿ ಕನ್ನಡದ ಹಬ್ಬಗಳನ್ನು ಆಚರಿಸುತ್ತಾರೆ. ಕನ್ನಡದ ದೀಪ ಹಚ್ಚುತ್ತಾರೆ.

ಡಾ. ಲಿಂಗರಾಜ ವೀ. ರಾಮಾಪೂರ.