ಅಮೆರಿಕಾ ಯೋಧನ ವಾಪಸ್ಸಿಗೆರಾಜತಾಂತ್ರಿಕ ತೊಡಕು

ನ್ಯೂಯಾರ್ಕ್, ಜು.೨೬- ಉತ್ತರ ಕೊರಿಯಾದ ಗಡಿ ದಾಟಿ ತೆರಳಿರುವ ಅಮೆರಿಕಾ ಯೋಧ ಟ್ರಾವಿಸ್ ಕಿಂಗ್‌ನ ಶೋಧಕಾರ್ಯ ಸದ್ಯದ ಮಟ್ಟಿಗೆ ಅನಿಶ್ಚಿತತೆಯಿಂದ ಕೂಡಿದ್ದು, ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ. ಆದರೆ ಮೂಲಗಳ ಪ್ರಕಾರ ಟ್ರಾವಿಸ್‌ನನ್ನು ದೇಶಕ್ಕೆ ಮರಳಿ ಕರೆತರುವ ನಿಟ್ಟಿನಲ್ಲಿ ಅಮೆರಿಕಾ ನಿರ್ಣಾಯಕ ಹಂತದಲ್ಲಿದೆ ಎನ್ನಲಾಗಿದೆ.
ಟ್ರಾವಿಸ್‌ನನ್ನು ಮರಳಿ ಅಮೆರಿಕಾಗೆ ಕರೆತರುವ ಹಾದಿಯಲ್ಲಿ ರಾಜತಾಂತ್ರಿಕ ಗೊಂದಲೇ ತೊಡಕಾಗಿದೆ. ಎಲ್ಲರಿಗೂ ತಿಳಿದಿರುವಂತೆ ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವೆ ನೇರ ರಾಜತಾಂತ್ರಿಕ ಸಂಬಂಧವಿಲ್ಲ. ಅದೂ ಅಲ್ಲದೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿದ್ದು, ಯುಎಸ್‌ನ ಸಬ್‌ಮೆರಿನ್‌ಗಳು ಕೂಡ ಅಲ್ಲಿ ನಿಲುಗಡೆ ಹೊಂದುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳು ಉತ್ತರ ಕೊರಿಯಾದ ಕಣ್ಣು ಕೆಂಪಾಗುವಂತೆ ಮಾಡಿದ್ದು, ಅಲ್ಲದೆ ದಿನಂಪ್ರತಿ ಎಂಬಂತೆ ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಕೂಡ ಉಡಾಯಿಸಿ ಅಮೆರಿಕಾಗೆ ತಿರುಗೇಟು ನೀಡುತ್ತಿದೆ. ಇದರ ನಡುವೆ ಅಮೆರಿಕಾ ಯೋಧ ಉತ್ತರ ಕೊರಿಯಾ ಗಡಿ ದಾಟಿ, ನಾಪತ್ತೆಯಾಗಿರುವುದು ಸಹಜವಾಗಿಯೇ ಯುಎಸ್‌ಗೆ ತಲೆನೋವು ಉಂಟು ಮಾಡಿದೆ. ಹಾಗಾಗಿ ರಾಜತಾಂತ್ರಿಕ ಸಂಬಂಧ ಹೊಂದಿರದ ಹಿನ್ನೆಲೆಯಲ್ಲಿ ಇದೀಗ ಉತ್ತರ ಕೊರಿಯಾ ಜೊತೆ ವ್ಯವಹರಿಸಲು ಅಮೆರಿಕಾ ಹಿಂಬಾಗಿಲು ಮೂಲಕ ಪ್ರಯತ್ನಿಸುತ್ತಿದೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಅಮೆರಿಕಾದ ಸೈನಿಕನನ್ನು ಉತ್ತರ ಕೊರಿಯಾ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ದಕ್ಷಿಣ ಕೊರಿಯಾ ಸಮುದ್ರದಲ್ಲಿ ಅಮೆರಿಕಾ ಮಿಲಿಟರಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದ್ದು, ಮತ್ತೊಂದೆಡೆ ಉತ್ತರ ಕೊರಿಯಾ ತನ್ನ ಕ್ಷಿಪಣಿಗಳ ಹಾರಾಟವನ್ನು ತೀವ್ರಗೊಳಿಸಿದೆ. ಇದರ ನಡುವೆ ಅಮೆರಿಕಾದ ಹಿಂಬಾಗಿಲ ಪ್ರಯತ್ನ ಎಷ್ಟರ ಮಟ್ಟಿಗೆ ಫಲನೀಡಲಿದೆ ಎಂದು ಕಾದು ನೋಡಬೇಕಿದೆ.