ಅಮೆರಿಕಾ ನಿರ್ಣಯ ವಿರುದ್ಧ ವೀಟೋ ಪ್ರಯೋಗ

ನ್ಯೂಯಾರ್ಕ್, ಮಾ.೨೩- ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿ ವಿಶ್ವಸಂಸ್ಥೆಯಲ್ಲಿ (ಯುಎನ್) ಕರೆ ನೀಡಿದ ಅಮೆರಿಕಾದ ಕರಡು ನಿರ್ಣಯದ ವಿರುದ್ಧ ರಷ್ಯಾ ಮತ್ತು ಚೀನಾ ವೀಟೋ ಅಧಿಕಾರ ಬಳಸಿ, ನಿರ್ಬಂಧಿಸಿವೆ.
ಭದ್ರತಾ ಮಂಡಳಿಯ ೧೫ ಸದಸ್ಯರಲ್ಲಿ ೧೧ ಸದಸ್ಯರು ನಿರ್ಣಯದ ಪರ, ಮೂರು ವಿರುದ್ಧವಾಗಿ ಮತ ಚಲಾಯಿಸಿದರೆ ಒಂದು ದೇಶದ ಸದಸ್ಯರು ಮತದಾನದಲ್ಲಿ ಭಾಗವಹಿಸಿರಲಿಲ್ಲ. ಅತ್ತ ಇಸ್ರೇಲ್ ಮೇಲೆ ಒತ್ತಡ ಹೇರದ ಈ ಕರಡು ನಿರ್ಣಯವು ಅಮೆರಿಕಾದ ಕಪಟ ನಾಟಕವನ್ನು ಬಯಲುಮಾಡಿದೆ ಎಂದು ಎರಡೂ ರಾಷ್ಟ್ರಗಳು ಟೀಕೆ ಮಾಡಿದೆ. ಎಲ್ಲಾ ನಾಗರಿಕರ ರಕ್ಷಣೆಗೆ, ಅಗತ್ಯದ ನೆರವು ಪೂರೈಕೆಗೆ ಪೂರಕವಾಗಿ ಗಾಜಾದಲ್ಲಿ ತಕ್ಷಣದ ಮತ್ತು ಶಾಶ್ವತ ಕದನವಿರಾಮ ಅನಿವಾರ್ಯವಾಗಿದೆ. ಎಂದು ಕರಡು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕರಡು ನಿರ್ಣಯದಲ್ಲಿ ಅನಿವಾರ್ಯ ಎಂಬ ಪದ ಬಳಸುವ ಮೂಲಕ ಅಮೆರಿಕ ಭದ್ರತಾ ಮಂಡಳಿಗೆ ಒಂದು ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಭದ್ರತಾ ಮಂಡಳಿ ಕದನ ವಿರಾಮವನ್ನು ಆಗ್ರಹಿಸಬೇಕು. ಇನ್ನಷ್ಟು ಕಠಿಣ ಪದ ಬಳಸಿ ಇಸ್ರೇಲ್‌ನ ಮೇಲೆ ಒತ್ತಡ ಹೇರಬೇಕು. ೩೦,೦೦೦ಕ್ಕೂ ಅಧಿಕ ಗಾಝಾ ನಿವಾಸಿಗಳು ಹತರಾದ ಬಳಿಕ ಅಮೆರಿಕಕ್ಕೆ ಕದನ ವಿರಾಮದ ಅಗತ್ಯ ಮನವರಿಕೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ರಷ್ಯಾದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಟೀಕಿಸಿದ್ದಾರೆ. ಈ ನಡುವೆ ಇಸ್ರೇಲ್ ತನ್ನ ಮಿತ್ರರಾಷ್ಟ್ರದ ಬೆಂಬಲವಿಲ್ಲದೆ ರಾಫಾ ಮೇಲೆ ಯೋಜಿತ ನೆಲದ ದಾಳಿಯೊಂದಿಗೆ ಮುಂದುವರಿಯುತ್ತದೆ ಎಂದು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಅಂಥ ಕಾರ್ಯಾಚರಣೆಯು ಉತ್ತರವಲ್ಲ. ಇದು ಹೆಚ್ಚು ನಾಗರಿಕರನ್ನು ಕೊಲ್ಲುವ ಅಪಾಯವನ್ನುಂಟು ಮಾಡುತ್ತದೆ, ಇದು ಮಾನವೀಯ ನೆರವು ಒದಗಿಸುವುದರೊಂದಿಗೆ ಹೆಚ್ಚಿನ ವಿನಾಶವನ್ನು ಉಂಟುಮಾಡುವ ಅಪಾಯವನ್ನುಂಟುಮಾಡುತ್ತದೆ. ಅಲ್ಲದೆ ಇದು ಪ್ರಪಂಚದಾದ್ಯಂತ ಇಸ್ರೇಲ್ ಅನ್ನು ಮತ್ತಷ್ಟು ಪ್ರತ್ಯೇಕಿಸುವ ಅಪಾಯವನ್ನುಂಟು ಮಾಡುತ್ತದೆ. ಈ ದೀರ್ಘಾವಧಿಯ ಭದ್ರತೆ ಮತ್ತು ಸ್ಥಿತಿಯನ್ನು ಅಪಾಯಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ.