ಅಮೆರಿಕಾ, ಥೈವಾನ್ರಾಯಭಾರಿ ಮೇಲೆ ನಿರ್ಬಂಧ

ಬೀಜಿಂಗ್, ಏ.೭- ಅಮೆರಿಕಾಗೆ ಭೇಟಿ ನೀಡಿರುವ ಥೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್ ವಿರುದ್ಧ ಚೀನಾ ಮತ್ತಷ್ಟು ಕೆಂಡ ಕಾರಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ಅಮೆರಿಕಾದಲ್ಲಿರುವ ಥೈವಾನ್‌ನ ವಾಸ್ತವಿಕ ರಾಯಭಾರಿ ಸಿಯಾವ್ ಬಿ ಖಿಮ್ ವಿರುದ್ಧ ಮತ್ತಷ್ಟು ಪ್ರತಿಬಂಧಗಳನ್ನು ಚೀನಾ ಹೇರಿದೆ.
ರಾಯಭಾರಿ ಸಿಯಾಮ್ ಮತ್ತು ಅವರ ಕುಟುಂಬದ ಸದಸ್ಯರು ಇನ್ನು ಮುಂದೆ ಚೀನಾ, ಹಾಂಕಾಂಗ್, ಮಕಾವ್‌ಗೆ ಭೇಟಿ ನೀಡುವುದನ್ನು ಚೀನಾ ನಿರ್ಬಂಧಿಸಿದೆ. ಅದೂ ಅಲ್ಲದೆ ಸಿಯಾವ್‌ಗೆ ಸಂಬಂಧಿಸಿದ ಸಂಸ್ಥೆಗಳು ಮುಖ್ಯ ಭೂಭಾಗದ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಸಹಕರಿಸುವುದನ್ನು ಕೂಡ ಇದೀಗ ಚೀನಾ ನಿಷೇಧಿಸಿದೆ. ಇನ್ನು ಥೈವಾನ್‌ನ ಅಧಿಕೃತ ಮಿತ್ರರಾಷ್ಟ್ರಗಳಾದ ಗ್ವಾಟೆಮಾಲಾ ಹಾಗೂ ಬೆಲೀಜ್‌ಗೆ ಭೇಟಿ ನೀಡಿದ ಬಳಿಕ ಅಮೆರಿಕಾಗೆ ಮರಳಿರುವ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ರಾಜಕಾರಣಿಗಳ ನಿಯೋಗವನ್ನು ಬುಧವಾರ ಅಧ್ಯಕ್ಷೆ ತ್ಸಾಯ್ ಭೇಟಿಯಾಗಿ, ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು.
ಸದ್ಯ ಇದು ಸಹಜವಾಗಿಯೇ ಚೀನಾ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಅದರಲ್ಲೂ ಥೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆಂಗ್ ಹಾಗೂ ಅಮೆರಿಕಾ ಸದನದ ಸ್ಪೀಕರ್ ಕೆವಿನ್ ಮೆಕಾರ್ಥಿ ನಡುವೆ ಹಲವು ವಿಚಾರಗಳಲ್ಲಿ ಮಾತುಕತೆ ನಡೆದಿತ್ತು.