ಅಮೆರಿಕಾ ಜೊತೆಗಿನ ಸಮರ ಜಗತ್ತಿಗೆ ಕಂಟಕ

ಬೀಜಿಂಗ್, ಜೂ.೫- ಸದ್ಯ ಅಮೆರಿಕಾ ಹಾಗೂ ಚೀನಾ ನಡುವಿನ ಶೀತಲ ಸಮರವು ಮುಂದೆ ಮತ್ತಷ್ಟು ಹೆಚ್ಚುವ ಆತಂಕ ಹೊಂದಲಾಗಿದ್ದು, ಈ ನಡುವೆ ಚೀನಾದ ರಕ್ಷಣಾ ಸಚಿವರ ಹೇಳಿಕೆ ಭಾರೀ ಪ್ರಾಮುಖ್ಯ ಪಡೆದುಕೊಂಡಿದೆ. ಚೀನಾ ಹಾಗೂ ಅಮೆರಿಕಾ ನಡುವಿನ ಯುದ್ದವು ಜಾಗತಿಕ ಮಟ್ಟದಲ್ಲಿ ಅಸಹನೀಯ ವಿಪತ್ತು ತರಲಿದೆ ಎಂದು ಲೀ ಶಾಂಘ್ಫು ತಿಳಿಸಿದ್ದಾರೆ.
ಸಿಂಗಾಪೂರ್‌ನಲ್ಲಿ ನಡೆಯುತ್ತಿರುವ ಶಾಂಘ್ರಿ-ಲಾ ವಾರ್ಷಿಕ ಭದ್ರತಾ ಸಭೆಯಲ್ಲಿ ಮಾತನಾಡಿದ ಲೀ, ಏಶ್ಯಾದಲ್ಲಿ ಕೆಲವೊಂದು ದೇಶಗಳು ಶಸ್ತ್ರಾಸ್ತ್ರ ಖರೀದಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಅಲ್ಲದೆ ಭವಿಷ್ಯದಲ್ಲಿ ಅಮೆರಿಕಾ ಹಾಗೂ ಚೀನಾ ನಡುವಿನ ಸಮರವು ಜಾಗತಿಕ ಮಟ್ಟದಲ್ಲಿ ವಿಧ್ವಂಸಕತೆಯನ್ನು ತರಲಿದೆ ಎಂದು ತಿಳಿಸಿದರು. ಅದೂ ಅಲ್ಲದೆ ಇತ್ತೀಚಿಗೆ ತೈವಾನ್ ಜಲಸಂಧಿಯಲ್ಲಿ ಅಮೆರಿಕಾ-ಕೆನಡಾ ಯುದ್ದನೌಕೆಗಳ ಜೊತೆ ಚೀನಾದ ನೌಕೆ ಅಪಾಯಕಾರಿಯಾಗಿ ವರ್ತಿಸಿದ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೀ, ಹೊರಗಿನ ದೇಶಗಳು ದಕ್ಷಿಣ ಚೀನಾ ಮಹಾಸಾಗರದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಕಳೆದ ಮಾರ್ಚ್‌ನಲ್ಲಿ ಚೀನಾ ರಕ್ಷಣಾ ಸಚಿವರಾಗಿ ಮುಂದಿನ ಐದು ವರ್ಷಗಳ ಅಧಿಕಾರ ಸ್ವೀಕರಿಸಿದ್ದ ಲೀ, ಇಲ್ಲಿಯ ವರೆಗೆ ಯಾವುದೇ ದೊಡ್ಡ ಮಟ್ಟದಲ್ಲಿ ಹೇಳಿಕೆ ನೀಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಅಮೆರಿಕಾ ಜೊತೆಗಿನ ಶೀತಲ ಸಮರದ ಬಗ್ಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ರಷ್ಯಾದಿಂದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಲೀ ಮೇಲೆ ೨೦೧೮ರಲ್ಲಿ ಪ್ರತಿಬಂಧವನ್ನು ಹಾಕಲಾಗಿದೆ. ಸದ್ಯ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತ ಪ್ರವಾಸದಲ್ಲಿದ್ದು, ಇದೇ ಅವಧಿಯಲ್ಲಿ ಲೀ ಅವರ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಅದೂ ಅಲ್ಲದೆ ಮುಂದೆ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಗೆ ಪ್ರವಾಸ ನಡೆಸಲಿದ್ದು, ಇಲ್ಲಿ ಕೂಡ ಇಂಡೋ-ಪೆಸಿಫಿಕ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ.