
ಟೊರಂಟೊ, ಏ.೧- ಕೆನಡಾದಿಂದ ಅಮೆರಿಕಾಗೆ ಅಕ್ರಮವಾಗಿ ದಾಟಲು ಯತ್ನಿಸಿದ್ದ ಎಂಟು ವಲಸಿಗರ ಮೃತದೇಹ ಎರಡೂ ದೇಶಗಳ ನಡುವಿನ ಸೈಂಟ್ ಲಾರೆನ್ಸ್ ನದಿಯ ದಡದಲ್ಲಿ ಪತ್ತೆಯಾಗಿದೆ. ಮೃತರಲ್ಲಿ ರೊಮೇನಿಯಾ ಹಾಗೂ ಭಾರತ ಮೂಲದ ಕುಟುಂಬಗಳು ಸೇರಿದೆ.
ಶುಕ್ರವಾರ ಸೇಂಟ್ ಲಾರೆನ್ಸ್ ನದಿಯಲ್ಲಿ ಪೊಲೀಸ್ ಹೆಲಿಕಾಪ್ಟರ್ ಎರಡು ಶವಗಳನ್ನು ಗುರುತಿಸಿದೆ. ಇಬ್ಬರು ಮಕ್ಕಳು ಸೇರಿದಂತೆ ಎಂಟು ವಲಸಿಗರ ಮೃತದೇಹಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ಸಮಯದಲ್ಲಿ ಈ ಪ್ರದೇಶದಲ್ಲಿ ನಾಪತ್ತೆಯಾಗಿರುವ ಬೋಟರ್‌ಗಾಗಿ ಹುಡುಕಾಟ ಮುಂದುವರೆದಿದೆ. ಕಾಪ್ಸಿ ಓಕ್ (೩೦) ಎಂಬಾತನಿಗಾಗಿ ಹುಡುಕಾಟ ಮುಂದುವರೆದಿದೆ. ಓಕ್ ಹಾಗೂ ಮೃತಪಟ್ಟ ಕುಟುಂಬದವರಿಗೆ ನಡುವೆ ಸಂಬಂಧವಿದೆಯೇ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಯುಎಸ್-ಕೆನಡಾ ಗಡಿಯ ನಡುವಿನ ಮೊಹಾಕ್ ಪ್ರದೇಶದ ಅಕ್ವೆಸಾಸ್ನೆಯಲ್ಲಿರುವ ತ್ಸಿ ಸ್ನೈಹ್ನೆಯಲ್ಲಿನ ಜವುಗು ಪ್ರದೇಶದಲ್ಲಿ ಮೊದಲ ಮೃತದೇಹ ಪತ್ತೆಯಾಗಿದೆ. ಬಳಿಕ ಕರಾವಳಿ ರಕ್ಷಣಾ ಪಡೆ ಹಾಗೂ ಪೊಲೀಸರು ಈ ಪ್ರದೇಶದಲ್ಲಿ ಇನ್ನಷ್ಟು ಪರಿಶೀಲನೆ ನಡೆಸಿದಾಗ ಮತ್ತೆ ೫ ಮೃತದೇಹ ಪತ್ತೆಯಾಗಿದೆ. ಇತರ ಮೃತದೇಹಗಳು ಸಮೀಪದಲ್ಲಿ ಪತ್ತೆಯಾಗಿವೆ. ಅವರ ಗುರುತುಗಳನ್ನು ಪೊಲೀಸರು ಇನ್ನೂ ಬಿಡುಗಡೆ ಮಾಡಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ಮಗು ಮೂರು ವರ್ಷದೊಳಗಿನ ಮತ್ತು ಕೆನಡಾದ ಪಾಸ್‌ಪೋರ್ಟ್ ಹೊಂದಿತ್ತು ಎನ್ನಲಾಗಿದೆ. ಮತ್ತೊಂದು ಮಗು ಕೂಡ ಕೆನಡಾದ ಪ್ರಜೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮೃತದೇಹಗಳು ರೊಮೇನಿಯನ್ ಮೂಲದ ಮತ್ತು ಭಾರತೀಯ ಮೂಲದ ಎರಡು ಕುಟುಂಬಗಳಿಂದ ವಲಸೆ ಬಂದವು ಎಂದು ನಂಬಲಾಗಿದೆ ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆಯ ಉಪ ಮುಖ್ಯಸ್ಥ ಲೀ-ಆನ್ ಒ’ಬ್ರಿಯನ್ ಸುದ್ದಿಗಾರರಿಗೆ ತಿಳಿಸಿದರು. ಕಳೆದ ವರ್ಷದ ಎಪ್ರಿಲ್ನಲ್ಲಿ ಇದೇ ಪ್ರದೇಶದಲ್ಲಿರುವ ಸೈಂಟ್ ರೆಗಿಸ್ ನದಿಯ ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ ೬ ಭಾರತೀಯರನ್ನು ರಕ್ಷಿಸಲಾಗಿತ್ತು.