ವಾಷಿಂಗ್ಟನ್, ಜೂ.೧೭- ೧೯೭೧ರಲ್ಲಿ ಪೆಂಟಗಾನ್ (ಅಮೆರಿಕಾದ ಮಿಲಿಟರಿ ವಿಭಾಗ)ಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಜಗತ್ತಿನ ಮುಂದೆ ಬಿಡುಗಡೆಗೊಳಿಸಿ, ಆಗಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಡ್ಯಾನಿಯಲ್ ಎಲ್ಸ್‌ಬರ್ಗ್ ಅವರು ತಮ್ಮ ಕ್ಯಾಲಿಫೋರ್ನಿಯಾದ ಕೆನ್‌ಸಿಂಗ್ಟನ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ೯೨ ವರ್ಷ ವಯಸ್ಸಾಗಿತ್ತು.
ಅಮೆರಿಕಾದ ಮಾಜಿ ಮಿಲಿಟರಿ ವಿಶ್ಲೇಷಕರಾಗಿದ್ದ ಎಲ್ಸ್‌ಬರ್ಗ್ ಅವರು ೧೯೭೧ರಲ್ಲಿ ಪೆಂಟಗಾನ್‌ಗೆ ಸಂಬಂಧಿಸಿದ ಸುಮಾರು ೭೦೦೦ ಪುಟುಗಳ ಅತ್ಯಂತ ಗೌಪ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಈ ದಾಖಲೆಗಳು ವಿಯೆಟ್ನಾಂ ಮೇಲೆ ಅಮೆರಿಕಾ ನಡೆಸಿದ್ದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿತ್ತು. ಅಲ್ಲದೆ ವಿಯೆಟ್ನಾಂನಲ್ಲಿ ಅಮೆರಿಕಾ ಯಾವ ರೀತಿಯ ಅನಾಚಾರಗಳನ್ನು ನಡೆಸಿತ್ತು ಎಂಬ ದಾಖಲೆಗಳನ್ನು ಇದು ಒಳಗೊಂಡಿತ್ತು. ಇನ್ನು ಗೌಪ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಸ್‌ಬರ್ಗ್ ಆಗಿನ ಕಾಲದಲ್ಲಿ ಅಮೆರಿಕಾದ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೆ ಎಲ್ಸ್‌ಬರ್ಗ್ ಬಿಡುಗಡೆ ಮಾಡಿದ್ದ ದಾಖಲೆಗಳು ಪತ್ರಿಕೆಗಳಲ್ಲಿ ವರದಿಯಾಗದಂತೆ ಆಗಿನ ಅಧ್ಯಕ್ಷ ನಿಕ್ಸನ್‌ಬರ್ಗ್ ನಡೆಸಿದ ಪ್ರಯತ್ನ ಕೂಡ ವಿಫಲವಾಗಿತ್ತು. ೧೯೭೧ರಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿ ನಡೆಸದಂತೆ ನಿಕ್ಸನ್‌ಬರ್ಗ್ ತಡೆಯಲು ಯತ್ನಿಸಿದ ಪರಿಣಾಮ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಅಂತಿಮವಾಗಿ ವಾದ-ಪ್ರತಿವಾದಗಳನ್ನು ಆಲಿಸಿದ ಅಂದಿನ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಎಲ್ಸ್‌ಬರ್ಗ್ ಮೇಲಿನ ಗೂಢಾಚಾರ ಆರೋಪವನ್ನು ವಜಾಗೊಳಿಸಿದ್ದರು. ಅಲ್ಲಿಂದ ಬಳಿಕವೂ ಎಲ್ಸ್‌ಬರ್ಗ್ ಅವರು ಅಮೆರಿಕಾದ ಯುದ್ದನೀತಿ ಹಾಗೂ ಇತರೆ ದೇಶಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗಳ ಕಟು ಟೀಕಾಕಾರಾಗಿದ್ದರು. ೧೯೩೧ರ ಎಪ್ರಿಲ್ ೭ರಂದು ಚಿಕಾಗೋದಲ್ಲಿ ಜನಿಸಿದ ಎಲ್ಸ್‌ಬರ್ಗ್, ಮಿಚಿಗನ್‌ನ ಡೆಟ್ರಾಯಿಟ್‌ನ ಉಪನಗರಗಳಲ್ಲಿ ಬೆಳೆದರು. ಹಾರ್ವರ್ಡ್ ಡಾಕ್ಟರೇಟ್ ಹೊಂದಿರುವ ಅವರು ಮೆರೈನ್ ಕಾರ್ಪ್ಸ್ ಪರಿಣತರಾಗಿದ್ದರು. ಪೆಂಟಗಾನ್‌ನಲ್ಲಿ ಕೆಲಸ ಮಾಡುವ ಮುನ್ನ ಅವರು ರಕ್ಷಣಾ ಮತ್ತು ರಾಜ್ಯ ಇಲಾಖೆಗಳಿಗೆ ಕೆಲಸ ಮಾಡಿದ್ದರು. ಜೂಲಿಯನ್ ಅಸ್ಸಾಂಜೆ ಮತ್ತು ಎಡ್ವರ್ಡ್ ಸ್ನೋಡೆನ್‌ರಂಥ ಅಮೆರಿಕಾದ ನೀತಿಗಳ ಇತ್ತೀಚಿಗಿನ ಟೀಕಾಕಾರರು ಕೂಡ ಎಲ್ಸ್‌ಬರ್ಗ್ ಹಾದಿಯನ್ನೇ ಅನುಸರಿಸಿದ್ದರು.