ನ್ಯೂಯಾರ್ಕ್, ಸೆ.೨೯- ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಲಿಕೆ ಪಡೆದಿರುವ ಅಮೆರಿಕಾ ಜೈಲಿನ ಬಗ್ಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದೆ. ಅಮೆರಿಕಾದ ಜೈಲುಗಳಲ್ಲಿ ವರ್ಣಭೇದ ನೀತಿ ಅನುಸರಿಸಲಾಗುತ್ತಿದ್ದು, ಹೆಚ್ಚಿನ ಸುಧಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯಿಂದ ನೇಮಕಗೊಂಡ ಮೂವರು ತಜ್ಞರು ಏಪ್ರಿಲ್ ಮತ್ತು ಮೇ ತಿಂಗಳ ಅವಧಿಗಳಲ್ಲಿ ಅಮೆರಿಕಾದ ಹಲವು ಜೈಲುಗಳಿಗೆ ಭೇಟಿ ನೀಡಿ, ವಿಸ್ರೃತವಾದ ಅಧ್ಯಯನ ವರದಿ ತಯಾರಿಸಿದ್ದರು. ಈ ವೇಳೆ ಹತ್ತು ಹಲವು ಆಘಾತಕಾರಿ ವಿಚಾರಗಳು ಬಹಿರಂಗವಾಗಿದೆ. ಕಪ್ಪು ವರ್ಣೀಯ ಮಹಿಳೆಯೊಬ್ಬರು ಹೆರಿಗೆಯ ಸಮಯದಲ್ಲಿ ಕೂಡ ಸಂಕೋಲೆಯಿಂದ ಬಂಧಿಸಲಾಗಿದ್ದರೆ ಪುರುಷರ ಕೈದಿಗಳು ಅತ್ಯಂತ ಕಠಿಣಕಾರಿ ಪರಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಬಹಿರಂಗವಾಗಿತ್ತು. ಈ ಮೂಲಕ ಅಮೆರಿಕಾ ಜೈಲುಗಳಲ್ಲಿ ಮಾನವ ಹಕ್ಕುಗಳ ಘನತೆಗೆ ಧಕ್ಕೆ ತರುವ ಕೆಲಸ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ವರದಿಯ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆಯಲ್ಲಿನ ಅಮೆರಿಕಾ ರಾಯಬಾರಿ ನಿರಾಕರಿಸಿದ್ದಾರೆ. ಅದೂ ಅಲ್ಲದೆ ಸೆರೆವಾಸದಲ್ಲಿರುವ ವ್ಯಕ್ತಿಗಳು, ನೌಕರರು ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್ ಹೇಳಿದೆ. ತಜ್ಞರು ಅಮೆರಿಕಾದ ಲೂಯಿಸಿಯಾನ ಜೈಲಿನಲ್ಲಿ ಪರಿಸ್ಥಿತಿಗಳ ನೇರ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಇಲ್ಲಿ ಪುರುಷ ಕೈದಿಗಳ ಜೊತೆ ಅತ್ಯಂತ ಹೀನಾಯ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇದು ೧೫೦ ವರ್ಷಗಳ ಹಿಂದಿನ ಪರಿಸ್ಥಿತಿಯನ್ನೇ ಹೋಲುತ್ತಿದೆ ಎಂದು ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಪ್ಪು ಬಣ್ಣದ ಕೈದಿಯೊಬ್ಬನನ್ನು ಯಾವುದೇ ವಿಚಾರಣೆ ನಡೆಸದೆ ೧೧ ವರ್ಷಗಳ ಕಾಲ ಜೈಲಿನಲ್ಲಿ ಇಟ್ಟುಕೊಂಡಿರುವ ಸಂಗತಿ ಕೂಡ ಇದೀಗ ಬಹಿರಂಗವಾಗಿದೆ. ಇದೇ ರೀತಿಯ ಅಮೆರಿಕಾದ ಹಲವು ಜೈಲುಗಳಲ್ಲಿ ಕೂಡ ಕಪ್ಪು ವರ್ಣೀಯ ನಾಗರಿಕರ ಮೇಲಿನ ದೌರ್ಜನ್ಯ ಹೆಚ್ಚಿನ ಮಟ್ಟದಲ್ಲಿದೆ ಎಂದು ವರದಿಯಲ್ಲಿದೆ.