ಅಮೆರಿಕಾದ ಜಲಾಂತರ್ಗಾಮಿ ನೌಕೆ ವಿರುದ್ಧ ಕ್ಯೂಬಾ ಆಕ್ರೋಶ

ಹವಾನಾ (ಕ್ಯೂಬಾ), ಜು.೧೨- ಒಂದೆಡೆ ಚೀನಾ, ಉತ್ತರ ಕೊರಿಯಾಗೆ ಜೊತೆಗಿನ ಮೈಮನಸ್ಸು ಬೆಳೆಸಿಕೊಂಡಿರುವ ನಡುವೆ ಇದೀಗ ಈಗಾಗಲೇ ಹಳಸಿರುವ ಕ್ಯೂಬಾ ಜೊತೆಗಿನ ಅಮೆರಿಕಾದ ಸಂಬಂಧ ಮತ್ತಷ್ಟು ತಾರಕಕ್ಕೇರಿದೆ. ಗ್ವಾಂಟನಾಮೊ ಕೊಲ್ಲಿಯಲ್ಲಿರುವ ತನ್ನ ಮಿಲಿಟರಿ ನೆಲೆಯಲ್ಲಿ ಅಮೆರಿಕಾ ಇತ್ತೀಚೆಗೆ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ನಿಲ್ಲಿಸುವ ಮೂಲಕ ಪ್ರಚೋದನಾತ್ಮಕ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕಾ ವಿರುದ್ಧ ಕ್ಯೂಬಾ ಆಕ್ರೋಶ ವ್ಯಕ್ತಪಡಿಸಿದೆ.
ಕ್ಯೂಬಾದ ಕರಾವಳಿ ಪ್ರದೇಶಗಳಲ್ಲಿ ಚೀನಾ ತನ್ನ ಬೇಹುಗಾರಿಕಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ಇತ್ತೀಚಿಗೆ ಅಮೆರಿಕಾ ಆರೋಪಿಸಿತ್ತು. ಇದೀಗ ಈ ಹೇಳಿಕೆ ಹೊರಬಿದ್ದ ಕೆಲವೇ ವಾರಗಳಲ್ಲಿ ಅಮೆರಿಕಾ ತನ್ನ ಪರಮಾಣು ಚಾಲಿತ ಜಲಾಂತರ್ಗಾಮಿಇ ನೌಕೆಗಳನ್ನು ಇಲ್ಲಿ ನಿಲ್ಲಿಸಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯೂಬಾ ವಿದೇಶಾಂಗ ಸಚಿವಾಲಯ, ಈ ಸಮಯದಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ತರುವ ಮೂಲಕ ವಿಶ್ವದ ಈ ಶಾಂತಿಯುತ ಪ್ರದೇಶದಲ್ಲಿ ಅಮೆರಿಕಾದ ಕ್ರಮದ ಹಿಂದೆ ಮಿಲಿಟರಿ ಕಾರಣವೇನು ಎಂದು ಆಶ್ಚರ್ಯಪಡುವುದು ಅನಿವಾರ್ಯವಾಗಿದೆ. ಜುಲೈ ೫ ರಿಂದ ಜುಲೈ ೮ ರವಗಿನ ಅವಧಿಯಲ್ಲಿ ಸಬ್‌ಮೆರಿನ್‌ಗಳನ್ನು ಇಲ್ಲಿ ನಿಲುಗಡೆ ನೀಡಲಾಗಿತ್ತು ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ. ಗ್ವಾಂಟನಾಮೊ ಕೊಲ್ಲಿಯಲ್ಲಿರುವ ತನ್ನ ಮಿಲಿಟರಿ ನೆಲೆಯ ನೌಕಾ ನೆಲೆಯಲ್ಲಿ ಜಲಾಂತರ್ಗಾಮಿ ನೌಕೆ ಇರುವ ಬಗ್ಗೆ ಅಮೆರಿಕಾ ಇನ್ನೂ ಖಚಿತಪಡಿಸಿಲ್ಲ. ಇನ್ನು ಕ್ಯೂಬಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ, ಫಿಡೆಲ್ ಕ್ಯಾಸ್ಟ್ರೊ ಅವರ ೧೯೫೯ ರ ಕ್ರಾಂತಿಯ ನಂತರ ಕ್ಯೂಬಾದಲ್ಲಿ ಕಂಡುಬಂದಿದ್ದ ಅತೀ ದೊಡ್ಡ ಬೀದಿ ಪ್ರತಿಭಟನೆಗಳ ಎರಡು ವರ್ಷಗಳ ವಾರ್ಷಿಕೋತ್ಸವದ ಗಮನವನ್ನು ಬೇರೆಡೆ ಸೆಳೆಯಲು ಕ್ಯೂಬಾ ನೋಡುತ್ತಿದೆ. ಅಲ್ಲದೆ ಕ್ಯೂಬಾ ಆ ಅಶಾಂತಿಯನ್ನು ಪ್ರಚೋದಿಸುತ್ತಿದೆ ಎಂದು ಅದು ತಿಳಿಸಿದೆ. ಒಟ್ಟಿನಲ್ಲಿ ಚೀನಾದಿಂದ ಸದ್ಯ ಎರಡೂ ದೇಶಗಳ ಸಂಬಂಧದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ.