ಅಮೆರಿಕಾದ ಖ್ಯಾತ ನಟಿ ಜೆಸ್ಸಿಕಾ ವಾಲ್ಟರ್ ನಿಧನ

ನ್ಯೂಯಾರ್ಕ್, ಮಾ.೨೬- ೭೦ರ ದಶಕದಲ್ಲಿ ಭಾರೀ ಪ್ರಸಿದ್ಧತೆ ಪಡೆದುಕೊಂಡಿದ್ದ ಎಮೈ ಪ್ರೆಂಟಿಸ್ ಧಾರಾವಾಹಿಯಲ್ಲಿ ಪತ್ತೆಧಾರಿಯಾಗಿ ಅಮೋಘವಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಅಮೆರಿಕಾದ ಖ್ಯಾತ ನಟಿ ಜೆಸ್ಸಿಕಾ ವಾಲ್ಟರ್ ನಿಧನರಾಗಿದ್ದು, ಅವರಿಗೆ ೮೦ ವರ್ಷ ವಯಸ್ಸಾಗಿತ್ತು.
ನನ್ನ ಪ್ರೀತಿಯ ತಾಯಿ ಮೃತಪಟ್ಟ ಸಂಗತಿಯನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ ಎಂದು ಜೆಸ್ಸಿಕಾ ಪುತ್ರಿ ಬ್ರೂಕೆ ಬ್ರೌಮೆನ್ ಕಂಬನಿ ಮಿಡಿದಿದ್ದಾರೆ. ೧೯೭೦ರಲ್ಲಿ ಎಮೈ ಪ್ರೆಂಟಿಸ್ ಧಾರಾವಾಹಿಯಲ್ಲಿ ಪತ್ತೆಧಾರಿ ಪೊಲೀಸ್ ಅಧಿಕಾರಿಯಾಗಿ ಜೆಸ್ಸಿಕಾ ನಟನೆ ಅವರಿಗೆ ಭಾರೀ ಪ್ರಸಿದ್ಧತೆ ತಂದುಕೊಟ್ಟಿತ್ತು. ಈ ಕಾರಣಕ್ಕಾಗಿ ಅವರಿಗೆ ಪ್ರತಿಷ್ಟಿತ ಎಮ್ಮಿ ಪ್ರಶಸ್ತಿ ಕೂಡ ಬಂದಿತ್ತು. ನಂತರ ೨೦೦೦ರಲ್ಲಿ ಪ್ರಸಾರವಾದ ಅರೆಸ್ಟೆಟ್ ಡೆವೆಲೆಪ್‌ಮೆಂಟ್ ಹಾಸ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಜೆಸ್ಸಿಕಾ ರಾತೋರಾತ್ರಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಅದೂ ಅಲ್ಲದೆ ನಂತರ ಅವಧಿಯಲ್ಲಿ ಜೆಸ್ಸಿಕಾ ಹಲವು ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು. ಜೆಸ್ಸಿಕಾ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.