ಅಮೆರಿಕಾದಲ್ಲಿ ೧೦ ಲಕ್ಷ ಮಕ್ಕಳಿಗೆ ಕೊರೊನಾ

ವಾಷಿಂಗ್ಟನ್, ನ. ೧೭- ಜಾಗತಿಕವಾಗಿ ಹರಡಿರುವ ಮಹಾಮಾರಿ ಕೊರೊನಾ ವೈರಸ್ ಅಮೆರಿಕಾ ದೇಶದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಗುಲಿದೆ ಎಂದು ಅಮೆರಿಕಾ ಮಕ್ಕಳ ಅಕಾಡೆಮಿ ತಿಳಿಸಿದೆ.
ಕೊರೊನಾ ಮಹಾಮಾರಿ ಆರಂಭವಾದಾಗಿನಿಂದ ನವೆಂಬರ್ ೧೨ರವರೆಗೆ ಅಮೆರಿಕಾದಲ್ಲಿ ೧೦,೩೯,೪೬೪ ಮಕ್ಕಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.
ಕಳೆದ ವಾರ ಅಮೆರಿಕಾದಲ್ಲಿ ೧,೧೧,೯೪೬ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.
ದಢಾರ, ಪೋಲಿಯೊ ಲಸಿಕೆ ಹಾಕಿಸಿರುವ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಸಾಲಿಗೋಜಾ ತಿಳಿಸಿದ್ದಾರೆ.
ಪುಟ್ಟಮಕ್ಕಳಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಅಮೆರಿಕಾ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರಬೇಕೆಂದು ಡಾ. ಗೋಜಾ ಆಗ್ರಹಿಸಿದ್ದಾರೆ.
ಅಮೆರಿಕಾದಲ್ಲಿ ಶೇ. ೧೬ ರಷ್ಟು ಕೊರೊನಾ ಸೋಂಕು ಪ್ರಕರಣಗಳು ತಂದೆ – ತಾಯಿಗಳಿಂದಲೇ ಮಕ್ಕಳಿಗೆ ಹರಡಿವೆ. ಜೊತೆಗೆ ಮಹಾಮಾರಿ ಕೊರೊನಾ ಅಮೆರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಶರವೇಗದಲ್ಲಿ ಹೆಚ್ಚುತ್ತಿದೆ.
ಇತ್ತೀಚಿನ ವರದಿಯ ಪ್ರಕಾರ ಅಮೆರಿಕಾ ಕೊರೊನಾ ಪ್ರಕರಣದಲ್ಲಿ ಮೊದಲನೆ ಸ್ಥಾನದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.