ಅಮೆರಿಕಾದಲ್ಲಿ ಸಂಶಯಾಸ್ಪದ ಬಲೂನ್ ಪತ್ತೆ!

ಉತಾಹ್ (ಅಮೆರಿಕಾ), ಫೆ.೨೪- ಅಮೆರಿಕಾದ ಪಶ್ಚಿಮ ಭಾಗದ ಉತಾಹ್‌ನಲ್ಲಿ ದೇಶದ ಮಿಲಿಟರಿ ವಿಮಾನವು ಹಾರುವ ಎತ್ತರದ ಬಲೂನ್ ಅನ್ನು ಪತ್ತೆಹಚ್ಚಿದೆ. ಆದರೆ ಈ ಬಲೂನ್‌ನಲ್ಲಿ ಯಾವುದೇ ರೀತಿಯಲ್ಲೂ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಇದರ ಹೊರತಾಗಿಯೂ ವಿಮಾನದ ಮೂಲದ ಪತ್ತೆ ಇನನೂ ಪತ್ತೆಯಾಗಿಲ್ಲ.
ಈ ಬಲೂನ್‌ನಲ್ಲಿ ಯಾವುದೇ ಕುಶಲತೆ ಮಾಡುವ ಉಪಕರಣಗಳು ಪತ್ತೆಯಾಗಿಲ್ಲ. ಅಲ್ಲದೆ ವಿಮಾನದ ಸುರಕ್ಷತೆಗೆ ಯಾವುದೇ ಅಪಾಯವನ್ನುಂಟು ಮಾಡಿಲ್ಲ ಎಂದು ಅಮೆರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಶುಕ್ರವಾರ ಕೊಲೊರಾಡೋ ಮತ್ತು ಉತಾಹ್ ಮೇಲೆ ಪೂರ್ವಕ್ಕೆ ತೇಲುತ್ತಿರುವುದನ್ನು ಗುರುತಿಸಲಾಗಿದೆ. ಶುಕ್ರವಾರ ಕಂಡುಬಂದ ಬಲೂನ್ ಸುಮಾರು ೪೪,೦೦೦ ಅಡಿ ಎತ್ತರದಲ್ಲಿ ಹಾರುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಇದರ ತನಿಖೆಗಾಗಿ ಫೈಟರ್ ಜೆಟ್‌ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅಮೆರಿಕಾ ಹಾಗೂ ಕೆನಡಾದ ವಾಯುರಕ್ಷಣಾ ಜವಾಬ್ದಾರಿ ಹೊಂದಿರುವ ಮಿಲಿಟರಿ ಕಮಾಂಡ್ ನೊರಾಡ್, ಅದರ ಯುದ್ಧ ವಿಮಾನಗಳು ಉತಾಹ್ ಮೇಲೆ ಹಾರುತ್ತಿದ್ದ ಬಲೂನ್ ಅನ್ನು ತಡೆದವು. ಬಲೂನ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಮೇಲ್ವಿಚಾರಣೆ ಮಾಡುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಅದು ತಿಳಿಸಿದೆ. ಈ ಬಲೂನ್ ವಿಮಾನದ ಹಾರಾಟದ ಸುರಕ್ಷತೆಗೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಿರ್ಧರಿಸಿದೆ ಎಂದು ತಿಳಿಸಿದೆ. ಈ ಬಲೂನ್ ಅನ್ನು ಮೈಲಾರ್ ಎಂಬ ಪಾಲಿಯೆಸ್ಟರ್ ಫಿಲ್ಮ್‌ನಿಂದ ತಯಾರಿಸಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಚೀನಾದ ಬಲೂನ್ ಅಮೆರಿಕಾ ಮೇಲೆ ಹಾರಾಟದ ಪರಿಣಾಮ ಎರಡೂ ದೇಶಗಳ ನಡುವೆ ಮತ್ತಷ್ಟು ಮನಸ್ತಾಪಕ್ಕೆ ಕಾರಣವಾಗಿತ್ತು. ಅಲ್ಲದೆ ಅಂತಿಮವಾಗಿ ಬಲೂನ್ ಅನ್ನು ಅಮೆರಿಕಾದ ಫೈಟರ್ ಜೆಟ್ ನೆರವಿನಿಂದ ಹೊಡೆದರುಳಿಸಲಾಗಿತ್ತು. ಇದೊಂದು ಚೀನಾದ ಪತ್ತೆಧಾರಿ ಬಲೂನ್ ಎಂದು ಅಮೆರಿಕಾ ಆರೋಪಿಸಿದ್ದರೆ, ಚೀನಾ ಇದನ್ನು ಹವಾಮಾನ ಬಲೂನ್ ಎಂದು ಕರೆದಿತ್ತು. ಸದ್ಯ ಉತಾಹ್‌ನಲ್ಲಿ ಇದೇ ರೀತಿಯ ಬಲೂನ್ ಇದೀಗ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.