ಅಮೆರಿಕಾದಲ್ಲಿ ರೈಫಲ್‌ಗಳ ಮೇಲೆ ನಿಷೇಧ ಸಾಧ್ಯತೆ

ವಾಷಿಂಗ್ಟನ್, ಮಾ.೨೪- ಬಹುಷಃ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿ ಗನ್‌ಗಳ ಖರೀದಿ ಅತೀ ಸುಲಭವೆಂದೇ ಹೇಳಬಹುದು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಅಮೆರಿಕಾದಲ್ಲಿ ಗುಂಡಿನ ದಾಳಿ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆ ದಾಖಲಾಗುತ್ತಿದ್ದು, ಅದರಲ್ಲೂ ಮೊನ್ನೆ ಕೊಲರಾಡೋದಲ್ಲಿ ನಡೆದ ಶೂಟೌಟ್‌ನಲ್ಲಿ ೧೦ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಾಲ್ಟ್ ಗನ್‌ಗಳ ಮೇಲೆ ನಿಷೇಧ ಹೇರಲು ಜೋ ಬೈಡೆನ್ ಆಡಳಿತ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.
ಭವಿಷ್ಯದಲ್ಲಿ ಅನೇಕ ಜೀವಗಳನ್ನು ಉಳಿಸುವ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಿದೆ. ಹೌಸ್ ಹಾಗೂ ಸೆನೆಟ್‌ನಲ್ಲಿ ನನ್ನ ಸಹೋದ್ಯೋಗಿಗಳು ಈ ಬಗ್ಗೆ (ನಿಷೇಧ ಹೇರುವ ಬಗ್ಗೆ) ನಿರ್ಣಯ ತೆಗೆದುಕೊಳ್ಳಬೇಕಿದೆ. ನಾವು ದೇಶದಲ್ಲಿ ಮತ್ತೆ ಅಸಾಲ್ಟ್ ರೈಫಲ್ (ಆಕ್ರಮಣಕಾರಿ ಶಸ್ತ್ರಾಸ್ತ್ರ) ಹಾಗೂ ಹೆಚ್ಚಿನ ಸಾಮರ್ಥ್ಯದ ಆಯುಧಗಳ ಮೇಲೆ ನಿಷೇಧ ಹೇರಬಲ್ಲೆವು. ಇದೊಂದು ಪಕ್ಷಪಾತದ ಸಮಸ್ಯೆಯಲ್ಲ, ಬದಲಾಗಿ ಇಡೀ ಅಮೆರಿಕಾದ ಸಮಸ್ಯೆ. ಇದು ಅಮೆರಿಕಾದ ಜೀವಗಳನ್ನು ಉಳಿಸಬಹುದು ಎಂದು ಬೈಡೆನ್ ತಿಳಿಸಿದ್ದಾರೆ.