ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕುಸಿತ

ದೆಹಲಿ, ನ.೧೬- ಕೊರೊನಾ ಸೋಂಕಿನ ಬಳಿಕ ವಿಶ್ವಾದ್ಯಂತ ವಿದೇಶಿ ಪ್ರಯಾಣವು ಬಹುತೇಕ ದುಸ್ವಪ್ನವಾಗಿ ಕಾಡುತ್ತಿದ್ದು, ಈಗಾಗಲೇ ವಿಮಾನಯಾನ ಸಂಸ್ಥೆಗಳು ನಷ್ಟದ ಹಾದಿಯಲ್ಲಿದೆ. ಈ ನಡುವೆ ಸೋಂಕಿನ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯರ ಸಂಖ್ಯೆಯಲ್ಲಿ ದಶಕದ ಬಳಿ ಭಾರೀ ಇಳಿಕೆ ದಾಖಲಾಗಿದೆ.
ಓಪನ್ ಡೋರ್ಸ್ ರಿಪೋರ್ಟ್-೨೦೨೧ ಬಿಡುಗಡೆ ಮಾಡಿರುವ ವರದಿಯಲ್ಲಿ ಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ೧೩.೨ರ ಕುಸಿತ ಕಂಡಿದ್ದು, ಇದು ದಶಕದ ಬಳಿ ಭಾರೀ ಇಳಿಮುಖ ಎಂದು ಗುರುತಿಸಲಾಗಿದೆ. ೨೦೧೯-೨೦ರ ಅವಧಿಯಲ್ಲಿ ಸುಮಾರು ೧.೯೩ ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರೆ ಈ ಬಾರಿ ಇದರ ಪ್ರಮಾಣ ೧.೬೭ ಲಕ್ಷಕ್ಕೆ ಇಳಿದಿದೆ. ಇದರ ಹೊರತಾಗಿಯೂ ಅಮೆರಿಕಾದಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಎರಡನೇ ಸ್ಥಾನ (೧೮.೩%) ಉಳಿಸಿಕೊಂಡಿದೆ. ಚೀನಾ ೩೪.೭ ಪ್ರತಿಶತದೊಂದಿಗೆ ಮೊದಲ ಸ್ಥಾನದಲ್ಲಿದೆ. ಸೋಂಕಿನ ಹೊರತಾಗಿಯೂ ಪ್ರಸಕ್ತ ವರ್ಷದ ಬೇಸಗೆ ವೇಳೆಯಲ್ಲಿ ಬರೊಬ್ಬರಿ ೬೨ ಸಾವಿರ ಅಮೆರಿಕಾ ವಿಸಾಗಳನ್ನು ಭಾರತೀಯರಿಗೆ ನೀಡಲಾಗಿರುವುದು ಕೂಡ ದಾಖಲೆಯಾಗಿದೆ. ಇನ್ನು ಒಟ್ಟು ಭಾರತೀಯ ವಿದ್ಯಾರ್ಥಿಗಳ ಪೈಕಿ ೩೪.೮ ಪ್ರತಿಶತ ವಿದ್ಯಾರ್ಥಿಗಳು ಗಣಿತ ಹಾಗೂ ಕಂಪ್ಯೂಟರ್ ವಿಜ್ಞಾನ ಆರಿಸಿಕೊಂಡಿದ್ದಾರೆ ಎಂದು ಬಹಿರಂಗವಾಗಿದೆ. ಉಳಿದಂತೆ ಇಂಜಿನಿಯರಿಂಗ್ (೩೩.೫%) ಹಾಗೂ ವ್ಯವಹಾರ ಮತ್ತು ನಿರ್ವಹಣೆ (೧೧.೭%) ನಂತರದ ಸ್ಥಾನದಲ್ಲಿವೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಗಳಲ್ಲೇ ವಿದ್ಯಾರ್ಜನೆ ಮಾಡುತ್ತಿದ್ದು, ವಿದೇಶಗಳಿಗೆ ತೆರಳುವಲ್ಲಿ ಹಿಂದೇಟು ಹಾಕಿರುವುದು ಸಹಜವಾಗಿಯೇ ಇದು ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಆದರೂ ಸದ್ಯ ನಿಧಾನವಾಗಿ ವಿದೇಶಿ ಪ್ರಯಾಣ ಆರಂಭಗೊಳ್ಳುತ್ತಿರುವುದು ವಿಮಾನಯಾನ ಸಂಸ್ಥೆಗಳಿಗೆ ಕೊಂಚ ನೆಮ್ಮದಿ ತಂದಿದೆ.