ಅಮೆರಿಕಾದಲ್ಲಿ ಐಸಿಯು ಬೆಡ್‌ಗಳಿಗೆ ಹೆಚ್ಚಿದ ಬೇಡಿಕೆ!

ನ್ಯೂಯಾರ್ಕ್, ನ.೨೩- ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾದಲ್ಲಿ ಕೂಡ ಯುರೋಪ್ ರೀತಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತ್ತಿದೆ. ಯುಎಸ್‌ನ ಹಲವು ರಾಜ್ಯಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಐಸಿಯು ಬೆಡ್‌ಗಳ ಕೊರತೆ ಕಾಣುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ ಎಂಬ ಆತಂಕ ಎದುರಾಗಿದೆ. ಅದೂ ಅಲ್ಲದೆ ಮುಂದಿನ ದಿನಗಳಲ್ಲಿ ಇಲ್ಲಿನ ಹಲವು ರಾಜ್ಯಗಳಲ್ಲಿ ಆರೋಗ್ಯ ಸಿಬ್ಬಂದಿಯ ಕೊರತೆ ಕೂಡ ಕಾಣಲಿದೆ ಎನ್ನಲಾಗಿದೆ.
ಕೊಲರಾಡೋ, ಮಿನ್ನೆಸೊಟಾ, ಮಿಚಿಗನ್ ಸೇರಿದಂತೆ ೧೫ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಏರಿಕೆ ದಾಖಲಾಗುತ್ತಲೇ ಇದೆ. ಇಲ್ಲಿನ ಆಸ್ಪತ್ರೆಗಳ ಐಸಿಯು ವಿಭಾಗಕ್ಕೆ ದಾಖಲಾಗುತ್ತಿರುವವರ ಸಂಖ್ಯೆಯ ಪ್ರಮಾಣ ಕ್ರಮವಾಗಿ ೪೧, ೩೭ ಹಾಗೂ ೩೪ ಪ್ರತಿಶತ ಇದೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಐಸಿಯು ಬೆಡ್‌ಗಳ ಬೇಡಿಕೆ ಕೂಡ ಏರಿಕೆಯಾಗುತ್ತಿರುವುದು ಅಲ್ಲಿನ ಆಡಳಿತಕ್ಕೆ ಆತಂಕ ತಂದಿದೆ. ಅದರಲ್ಲೂ ಮಿಚಿಗನ್‌ನಲ್ಲಿ ಇಡೀ ಅಮೆರಿಕಾದಲ್ಲೇ ಸೋಂಕಿತರ ಪ್ರಮಾಣ ದೃಷ್ಟಿಯಲ್ಲಿ ಅಧಿಕ ಇದ್ದರೂ ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿಲ್ಲ. ಇಲ್ಲಿನ ಹಲವು ರಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋವಿಡ್ ನಿಯಂತ್ರಣಕ್ಕೆ ತರುವ ಸಲುವಾಗಿ ಅಮೆರಿಕಾಸದಲ್ಲಿ ಈಗಾಗಲೇ ಬೂಸ್ಟರ್ ಶಾಟ್ಸ್‌ಗಳಿಗೆ ಚಾಲನೆ ನೀಡಲಾಗಿದೆ.