ಅಮೆರಿಕಾಕ್ಕೆ ಪೆರು ಮಾಜಿ ಅಧ್ಯಕ್ಷ ಶರಣಾಗತಿ

ನ್ಯೂಯಾರ್ಕ್, ಎ.೨೨- ಅಧಿಕಾರದಲ್ಲಿದ್ದ ವೇಳೆ ಕಟ್ಟಡ ನಿರ್ಮಾಣ ಕಂಪೆನಿಯಿಂದ ಸುಮಾರು ೨೦ ಮಿಲಿಯನ್ ಡಾಲರ್ ಲಂಚ ಪಡೆದ ಪ್ರಕರಣ ಎದುರಿಸುತ್ತಿರುವ ಪೆರು ಮಾಜಿ ಅಧ್ಯಕ್ಷ ಅಲೆಜಾಂಡ್ರೊ ಟೊಲೆಡೊ ಇದೀಗ ಸ್ವತಹ ಅಮೆರಿಕಾ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅಮೆರಿಕಾದಿಂದ ಪೆರುವಿಗೆ ಟಾಲೆಡೊ ಅವರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.
ಟಾಲೆಡೊ (೭೭) ಅವರು ೨೦೦೧ ಹಾಗೂ ೨೦೦೬ರ ನಡುವಿನ ತಮ್ಮ ಅಧ್ಯಕ್ಷಾವಧಿಯಲ್ಲಿ ಬ್ರೆಜಿಲಿಯನ್ ನಿರ್ಮಾಣ ಕಂಪೆನಿ ಒಡೆಬ್ರೆಕ್ಟ್‌ನಿಂದ ಸಾರ್ವಜನಿಕ ಕೆಲಸದ ಗುತ್ತಿಗೆ ನೀಡುವುದಕ್ಕಾಗಿ ಸುಮಾರು ೨೦ ಮಿಲಿಯನ್ ಡಾಲರ್ ಲಂಚ ಪಡೆದ ಪ್ರಕರಣ ಎದುರಿಸುತ್ತಿದ್ದಾರೆ. ಆದರೆ ೨೦೦೬ರ ಬಳಿಕ ಟಾಲೆಡೊ ಅವರು ಪೆರು ದೇಶವನ್ನು ತ್ಯಜಿಸಿ ಅಮೆರಿಕಾಗೆ ಪಲಾಯನಗೈದಿದ್ದರು. ಆದರೆ ಪೆರುವಿನ ಮನವಿ ಮೇರೆಗೆ ಅಮೆರಿಕಾದ ಪೊಲೀಸ್ ಅಧಿಕಾರಿಗಳು ಟೊಲೆಡೊ ಅವರನ್ನು ಬಂಧಿಸಿತ್ತು. ಆದರೆ ಲಂಚ ಕೇಳಿ ಹಾಗೂ ಪಡೆದ ಆರೋಪವನ್ನು ಟಾಲೆಡೊ ಅವರು ತಿರಸ್ಕರಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ರ ಮೇನಲ್ಲಿ ಪೆರು ಅಧಿಕಾರಿಗಳು ಅಮೆರಿಕಾಗೆ ಹಸ್ತಾಂತರ ವಿನಂತಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಟೊಲೆಡೊ ಅವರನ್ನು ಮೊದಲ ಬಾರಿಗೆ ೨೦೧೯ ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಯಿತು. ಬಳಿಕ ಅವರಿಗೆ ೨೦೨೦ ರಲ್ಲಿ ಜಾಮೀನು ನೀಡಲಾಯಿತು. ಅಲ್ಲದೆ ಎಲೆಕ್ಟ್ರಾನಿಕ್ ಪಾದದ ಮಾನಿಟರ್‌ನೊಂದಿಗೆ ಗೃಹಬಂಧನದಲ್ಲಿ ವಾಸಿಸಲು ಆದೇಶಿಸಲಾಯಿತು. ಆದರೆ ಅಮೆರಿಕಾದಿಂದ ಪೆರುವಿಗೆ ಹಸ್ತಾಂತರ ಪ್ರಕ್ರಿಯೆಯನ್ನು ತಡೆಯಲು ಟಾಲೆಡೊ ಪರ ವಕೀಲರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದೆ. ಪೆರುವಿಗೆ ಹಿಂದಿರುಗಿದರೆ ಟಾಲೆಡೊ ಅವರ ಜೀವಕ್ಕೆ ಅಪಾಯವಿದೆ ಎಂಬ ವಾದವನ್ನು ವಕೀಲರು ಮಂಡಿಸಿದ್ದರು. ನನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಟಾಲೆಡೊ ತಿಳಿಸಿದ್ದಾರೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ದಕ್ಷಿಣ ಜಿಲ್ಲಾ ನ್ಯಾಯಾಧೀಶರು, ಟೊಲೆಡೊ ಅವರು ಒಪ್ಪಂದ ಮತ್ತು ಮನಿ ಲಾಂಡರಿಂಗ್ ಮಾಡಿದ್ದಾರೆ ಎಂದು ನಂಬಲು ಸಂಭವನೀಯ ಕಾರಣ ಸ್ಥಾಪಿಸಲು ಸಾಕಷ್ಟು ಪುರಾವೆಗಳಿವೆ ಎಂದು ತೀರ್ಪು ನೀಡಿದ್ದರು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಂತಿಮವಾಗಿ ಟಾಲೆಡೊ ಅವರನ್ನು ಪೆರುವಿಗೆ ಹಸ್ತಾಂತರ ನಡೆಯಲಿದೆ.