ಅಮೆರಿಕದ ೩೦ನಗರಗಳ ಜೊತೆ ನಿತ್ಯಾನಂದ ಸಾಂಸ್ಕೃತಿಕ ಒಪ್ಪಂದ

ನ್ಯೂಯಾರ್ಕ್, ಮಾ.೧೮- ಸ್ವಯಂಘೋಷಿತ ದೇವಮಾನವ ಹಾಗೂ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನ ತಥಾಕಥಿತ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಅಮೆರಿಕಾದ ೩೦ಕ್ಕೂ ಹೆಚ್ಚಿನ ನಗರಗಳ ಜೊತೆಗೆ ಸಾಂಸ್ಕೃತಿಕ ಸಹಭಾಗಿತ್ಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೆ ಈ ಪೈಕಿ ಅಮೆರಿಕಾದ ನ್ಯೂಜೆರ್ಸಿಯ ನೆವಾರ್ಕ್ ನಗರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಜೊತೆ ಸಹೋದರಿ ನಗರ ಒಪ್ಪಂದ ರದ್ದುಗೊಳಿಸಿದೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ನಿತ್ಯಾನಂದ ೨೦೧೯ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ಹೆಸರಿನ ಹೊಸ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ರಿಚ್‌ಮಂಡ್, ವರ್ಜೀನಿಯಾದಿಂದ ಡೇಟನ್, ಓಹಾಯೋ, ಬ್ಯೂನಾ ಪಾರ್ಕ್, ಫ್ಲೋರಿಡಾ ಸೇರಿದಂತೆ ಅಮೆರಿಕಾದ ೩೦ಕ್ಕೂ ಹೆಚ್ಚಿನ ನಗರಗಳು ಇದೇ ಯುನೈಟೆಡ್ ನಕಲಿ ಸ್ಟೇಟ್ಸ್ ಆಫ್ ಕೈಲಾಸ ಜೊತೆ ಸಾಂಸ್ಕೃತಿಕ ಪಾಲುದಾರಿಕೆ ಒಪ್ಪಂದಕ್ಕೆ ಹಾಕಿವೆ ಎನ್ನಲಾಗಿದೆ. ಇನ್ನು ಅಮೆರಿಕಾದ ಫೋಕ್ಸ್ ನ್ಯೂಸ್‌ನ ವರದಿಯಲ್ಲಿ, ನಕಲಿ ರಾಷ್ಟ್ರ (ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ)ದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಕುರಿತ ಅಮೆರಿಕಾದ ಕೆಲವು ನಗರಗಳ ಬಳಿಯಿಂದ ಪ್ರತಿಕ್ರಿಯೆ ಕೇಳಿದ್ದೇವೆ. ಅಲ್ಲದೆ ಇಲ್ಲಿಯವರೆಗೆ ಹೆಚ್ಚಿನ ನಗರಗಳು ಈ ಘೋಷಣೆಗಳು ನಿಜವೆಂದು ದೃಢಪಡಿಸಿವೆ. ಇದು ಕೇವಲ ನಗರಗಳ ಮೇಯರ್‌ಗಳು ಅಥವಾ ಸಿಟಿ ಕೌನ್ಸಿಲ್‌ಗಳಲ್ಲ. ಬದಲಾಗಿ ಫೆಡರಲ್ ಸರ್ಕಾರವನ್ನು ನಡೆಸುತ್ತಿರುವ ಜನರು ಕೂಡ ನಕಲಿ ರಾಷ್ಟ್ರದ ಮೋಸಕ್ಕೆ ಬೀಳುತ್ತಿದ್ದಾರೆ ಎಂದು ವರದಿ ಪ್ರಕಟಿಸಿದೆ. ಅಲ್ಲದೆ ಸ್ವಯಂಘೋಷಿತ ದೇವಮಾನವನ ಪ್ರಕಾರ, ಈಗಾಗಲೇ ಕಾಂಗ್ರೆಸ್‌ನ (ಅಮೆರಿಕಾ) ಇಬ್ಬರು ಸದಸ್ಯರು ಸದಸ್ಯರು ಕೈಲಾಸಕ್ಕೆ ವಿಶೇಷ ಕಾಂಗ್ರೆಸ್ ಮಾನ್ಯತೆ ನೀಡಿದ್ದು, ಅಲ್ಲದೆ ಅವರಲ್ಲಿ ಒಬ್ಬರು ಕ್ಯಾಲಿಫೋರ್ನಿಯಾದ ಕಾಂಗ್ರೆಸ್ ಮಹಿಳೆ ನಾರ್ಮಾ ಟೋರೆಸ್ ಎಂಬವರು ಸದನದ ವಿನಿಯೋಗ ಸಮಿತಿಯಲ್ಲಿದ್ದಾರೆ ಎಂದು ವರದಿ ಮಾಡಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ವಿವಾದಗಳು ತಿಳಿದು ಬಂದ ಬಳಿಕ ನಾವು ಕೂಡಲೇ ಆದೇಶಕ್ಕೆ ಬರುವಂತೆ ಜನವರಿ ೧೮ರಂದು ಅದರ ಜೊತೆಗಿನ ಸಹೋದರಿ ನಗರ ಒಪ್ಪಂದವನ್ನು ರದ್ದುಗೊಳಿಸಿದ್ದೇವೆ. ಇದೊಂದು ತೀರಾ ವಿಷಾದನೀಯ ಸಂಗತಿಯಾಗಿದ್ದರೂ ನೆವಾರ್ಕ್ ನಗರವು ಪರಸ್ಪರ ಸಂಪರ್ಕ, ಬೆಂಬಲ ಮತ್ತು ಪರಸ್ಪರ ಗೌರವದಿಂದ ಸಮೃದ್ಧಗೊಳಿಸುವ ಸಲುವಾಗಿ ವೈವಿಧ್ಯಮಯ ಸಂಸ್ಕೃತಿಗಳ ಜನರೊಂದಿಗೆ ಪಾಲುದಾರಿಕೆಗೆ ಬದ್ಧವಾಗಿದೆ.
-ಸುಸಾನ್ ಗರೋಫಾಲೋ, ನೆವಾರ್ಕ್ ನಗರದ ಸಂಪರ್ಕ ವಿಭಾಗದ ಪತ್ರಿಕಾ ಕಾರ್ಯದರ್ಶಿ